ಧಾರವಾಡ: ಮುಂಬರುವ ಮಾರ್ಚ್ ನಂತರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಈ ಬಾರಿ ನನಗೆ ಖಂಡಿತವಾಗಿ ಸಚಿವ ಸ್ಥಾನ ದೊರೆಯುತ್ತದೆ ಎಂದು ಶಾಸಕ ವಿನಯ ಕುಲಕರ್ಣಿ ಭವಿಷ್ಯ ನುಡಿದರು.
ಕಿತ್ತೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ. ಎರಡು ದಶಕಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದ್ದೇನೆ. ಮಾರ್ಚ್ ನಂತರ ಸಚಿವ ಸಂಪುಟ ಪುನರ್ ರಚನೆ ನಡೆಯಲಿದ್ದು, ಈ ಬಾರಿ ನನಗೆ ಸಚಿವ ಸ್ಥಾನ ಸಿಗುವುದು ಪಕ್ಕಾ ಎಂದರು.
ಸದ್ಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಏನೆಲ್ಲ ಬೆಳವಣಿಗೆ ನಡೆಯುತ್ತಿವೆಯೋ ಅವುಗಳ ಬಗ್ಗೆ ನಾನು ಬಹಿರಂಗವಾಗಿ ಮಾತನಾಡಲು ಇಚ್ಚೇ ಪಡುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಎಲ್ಲ ತೊಂದರೆಗಳನ್ನು ಪಕ್ಷದ ಹೈ ಕಮಾಂಡ್ ನೋಡಿಕೊಳ್ಳುತ್ತದೆ. ಕಾಲ ಕಾಲಕ್ಕೆ ಯಾವ ನಿರ್ಣಯ ತೆಗೆದುಕೊಳ್ಳಬೇಕು ಎಂಬುದು ಪಕ್ಷದ ಹೈ ಕಮಾಂಡ್‌ಗೆ ಗೊತ್ತಿದೆ ಎಂದರು.
ಒಂದು ವೇಳೆ ಹೈ ಕಮಾಂಡ್ ಸಿಎಂ ಬದಲಾವಣೆ ಕುರಿತು ನಿಮ್ಮ ಅಭಿಪ್ರಾಯ ಕೇಳಿದರೆ ಏನು ಹೇಳುತ್ತಿರಿ..? ಎಂಬ ಪ್ರಶ್ನೆಗೆ ಅದನ್ನು ಹೈ ಕಮಾಂಡ್ ಮುಂದೆಯೇ ಹೇಳುತ್ತೇನೆ ಎಂದು ಶಾಸಕ ವಿನಯ್ ಪ್ರತಿಕ್ರಿಯಿಸಿದರು.