ದಾವಣಗೆರೆ: ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಭಾವನಾತ್ಮಕವಾಗಿ ಕೆರಳಿಸಿ ಸಮಾಜ ಒಡೆಯಲಿಕ್ಕೆ ಹೋಗಿದ್ರು. ಹೀಗಾಗಿ, ಸಮಾಜದಲ್ಲಿ ಸಾಮರಸ್ಯ ತರಬೇಕೆಂಬ ಕಾರಣಕ್ಕೆ ಮತಾಂತರ ನಿಷೇಧ ಕಾಯಿದೆಯನ್ನು ನಮ್ಮ ಸರಕಾರ ಹಿಂಪಡೆದಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆದಿರುವ ಬಗ್ಗೆ ಜನರಿಗೆ ಯಾವುದೇ ರೀತಿಯ ಬೇಸರವಿಲ್ಲ. ಆದರೆ, ಈಗ ಬಿಜೆಪಿಗರು ನಿರುದ್ಯೋಗಿಗಳಾಗಿದ್ದಾರೆ. ಹಾಗಾಗಿ, ಸಾಮರಸ್ಯ ಬಿತ್ತಲು ಹೊರಟಿರುವ ನಮ್ಮ ಕಾಂಗ್ರೆಸ್ ಸರ್ಕಾರದ ವಿರುದ್ಧ ಏನಾದರೂ ಹೇಳಬೇಕಲ್ಲ ಅಂತಾ ಆಕ್ಷೇಪ ಮಾಡುತ್ತಿದ್ದಾರೆ ಎಂದರು.
ವಿದ್ಯುತ್ ದರವನ್ನು ಬಿಜೆಪಿ ಸರಕಾರವೇ ಹೆಚ್ಚಿಸಿತ್ತು. ನಾವು ದರ ಹೆಚ್ಚಿಸಿಲ್ಲ. ಆ.೧ರಿಂದ ರಾಜ್ಯದ ಶೇ.೯೫ಗಳಷ್ಟು ಕುಟುಂಬಗಳಿಗೆ ವಿದ್ಯುತ್ ಪೂರೈಸುತ್ತೇವೆ. ಆಗ ವಿದ್ಯುತ್ ದರದ ಪ್ರಶ್ನೆಯೇ ಬರಲ್ಲ. ಕಾಂಗ್ರೆಸ್ ಸರಕಾರ ಜಾರಿಗೆ ತರುತ್ತಿರುವ ಯೋಜನೆಗಳ ಫಲಾನುಭವಿಗಳು ಕರ್ನಾಟಕದವರಾಗಿರಬೇಕು ಎನ್ನುವುದು ಷರತ್ತಾ?, ಇದರಲ್ಲಿ ಏನಾದ್ರು ತಪ್ಪಿದೆಯಾ?. ಯಾವುದೇ ಯೋಜನೆ ಜಾರಿಗೆ ತರಬೇಕಾದರೆ ಕೆಲ ಮಾರ್ಗಸೂಚಿಗಳನ್ನು ರೂಪಿಸುವುದು ಸರ್ಕಾರದ ಕರ್ತವ್ಯ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಬಗರ್ಹುಕುಂಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಪಡಿಸಿ, ಕಾಲಮಿತಿಯಲ್ಲಿ ನ್ಯಾಯ ಒದಗಿಸಲಾಗುವುದು. ಈಗಾಗಲೇ ಸಚಿವ ಕೃಷ್ಣ ಭೈರೇಗೌಡರು ಸುತ್ತೋಲೆ ಕಳುಹಿಸಿದ್ದು, ಬಗರ್ಹುಕುಂ ಸಮಿತಿ ರಚನೆ ಆಗುತ್ತಿವೆ. ಬಗರ್ಹುಕುಂಗೆ ಸಂಬಂಧಿಸಿದಂತೆ ಪೆಂಡಿಂಗ್ ಇರುವ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ, ಕಾಲಮಿತಿಯಲ್ಲಿ ಅವುಗಳನ್ನು ಇತ್ಯರ್ಥ ಪಡಿಸಿ ಅರ್ಜಿದಾರರಿಗೆ ನ್ಯಾಯ ಕೊಡಿಸುವ ಕೆಲಸವನ್ನು ನಮ್ಮ ಸರಕಾರ ಮಾಡಲಿದೆ ಎಂದು ಹೇಳಿದರು.