ರಬಕವಿ-ಬನಹಟ್ಟಿ: ತೇರದಾಳ ಕ್ಷೇತ್ರದ ಸಹಕಾರಿ ಕ್ಷೇತ್ರದ ಆಸಂಗಿ, ಬನಹಟ್ಟಿ ಹಾಗೂ ಹಣಗಂಡಿ ಪಿಕೆಪಿಎಸ್ ಚುನಾವಣೆ ಕಾವೇರಿದ್ದು, ಇದೀಗ ಬನಹಟ್ಟಿ ಪಿಕೆಪಿಎಸ್ ಚುನಾವಣೆಯು ಪೂರ್ಣವಾಗಿ ರಾಜಕೀಯ ರಂಗು ಪಡೆದಿದೆ.
ಸತತ 2 ದಶಕಗಳ ಕಾಲ ಅಧ್ಯಕ್ಷರಾಗಿರುವ ಭೀಮಶಿ ಮಗದುಮ್‌ರನ್ನು ಹಣಿಯಲು ಶಾಸಕ ಸಿದ್ದು ಸವದಿ ಬಹಿರಂಗವಾಗಿ ಸೆಡ್ಡು ಹೊಡೆದಿದಿರುವ ಕಾರಣ ಇದೀಗ ಸಹಕಾರಿ ಚುನಾವಣೆ ವಿಶೇಷತೆ ಪಡೆಯುವಲ್ಲಿ ಕಾರಣವಾಗಿದೆ.
ಶಾಸಕ ಸವದಿ ತಮ್ಮ ಬೆಂಬಲಿಗರ ಬಣವನ್ನೊಂದರಲ್ಲಿ ೧೨ ಜನರ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆ ನಡೆಯಲೇಬೇಕು. ಸರ್ವಾಧಿಕಾರಿ ಧೋರಣೆ ಬಿಟ್ಟು ಮತದಾನದ ಮೂಲಕವೇ ಆಯ್ಕೆಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.
ಸಹಕಾರಿ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಎಲ್ಲ ಸದಸ್ಯರಿಗೂ ಅನುಕೂಲಸಾರವಾಗಿ ಸ್ಥಾನ-ಮಾನ ದೊರಕಬೇಕು. ಈ ನಿಟ್ಟಿನಲ್ಲಿ ಸರ್ಕಾರ ನಿಯಮಾನುಸಾರವಾಗಿ ನಡೆಯಲು ಬಿಜೆಪಿ ಬೆಂಬಲಿತ ಸದಸ್ಯರು ಕಣದಲ್ಲಿರುವರು ಎಂದು ಸವದಿ ಸ್ಪಷ್ಟಪಡಿಸಿದರು.
ಮತ್ತೊಂದೆಡೆ ಹಾಲಿ ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಭೀಮಶಿ ಮಗದುಮ್ ಮಾತನಾಡಿ, ಪಿಕೆಪಿಎಸ್ ಸಂಘದ ವಿರೋಧಿಗಳೇ ಇದರಲ್ಲಿ ಕಾಣಸಿಗುತ್ತಿದ್ದು, ಸಂಘದ ಯಾವದೇ ವ್ಯವಹಾರ, ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೆ, ಸಂಘದ ವಿರೋಧಿ ನೀತಿಯಿಂದ ಈಗಾಗಲೇ ಶಾಸಕ ಸಿದ್ದು ಸವದಿಯವರ ನೇತೃತ್ವದಲ್ಲಿ ಸಹಕಾರಿ ಸಂಘದ ಆಸ್ತಿ ಕಳೆದಕೊಳ್ಳುವಲ್ಲಿ ಕಾರಣವಾಗಿದ್ದು, ಸ್ವಾರ್ಥ ರಾಜಕಾರಣ ಇದೀಗ ಸಹಕಾರಿ ಕ್ಷೇತ್ರದಲ್ಲಿ ನಡೆಸುತ್ತಿರುವುದು ಸರಿಯಲ್ಲವೆಂದರು.