Home ಸುದ್ದಿ ದೇಶ ಸಂಸತ್ತಿನಲ್ಲಿ ಅದಾನಿ ವಿವಾದದ ಗದ್ದಲ: ಉಭಯ ಸದನ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

ಸಂಸತ್ತಿನಲ್ಲಿ ಅದಾನಿ ವಿವಾದದ ಗದ್ದಲ: ಉಭಯ ಸದನ ಕಲಾಪ ಮಧ್ಯಾಹ್ನ 2ಕ್ಕೆ ಮುಂದೂಡಿಕೆ

0

ನವದೆಹಲಿ: ಅದಾನಿ ಗ್ರೂಪ್ ವಿವಾದ ಮತ್ತು ಗಡಿಯಲ್ಲಿ ಚೀನಾದ ಅಕ್ರಮಗಳ ಬಗ್ಗೆ ಚರ್ಚಿಸಲು ಲೋಕಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಮುಂದೂಡಿಕೆ ನೋಟಿಸ್ ನೀಡಿದರು. ಲೋಕಸಭೆಯಲ್ಲಿ ಪಕ್ಷದ ಸಚೇತಕ ಟಾಗೋರ್, ಅದಾನಿ ಗುಂಪಿನ ಷೇರುಗಳ ಬೆಲೆಗಳು ಸತತವಾಗಿ ಕುಸಿಯುತ್ತಿರುವ ಕಾರಣದಿಂದ ಇದರ ಬಗ್ಗೆ ತುರ್ತಾಗಿ ಚರ್ಚಿಸುವ ಅಗತ್ಯವಿದೆ ಎಂದರು. ಹಿಂಡೆನ್​ಬರ್ಗ್ ವರದಿಯ ನಂತರ ಅದಾನಿ ಬಿಕ್ಕಟ್ಟು ತಲೆದೋರಿದೆ.
ಎಸ್​ಬಿಐ ಮತ್ತು ಎಲ್​ಐಸಿಗಳ ಮೂಲಕ ಬೃಹತ್ ಮೊತ್ತದ ಸಾರ್ವಜನಿಕರ ಹಣವು ಅದಾನಿ ಗ್ರೂಪ್​ನಲ್ಲಿ ಸಿಲುಕಿದೆ. ಹೀಗಾಗಿ ಸಾಮಾನ್ಯ ವಿಷಯಗಳನ್ನು ಬದಿಗಿಟ್ಟು ಸದನದಲ್ಲಿ ಈ ವಿಷಯ ತಕ್ಷಣವೇ ಚರ್ಚಿಸುವುದು ಸೂಕ್ತ. ನಷ್ಟದ ಸ್ಥಿತಿ ಮತ್ತು ಸಾರ್ವಜನಿಕ ಹಣವನ್ನು ಉಳಿಸಲು ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಹಣಕಾಸು ಸಚಿವರು ವಾಸ್ತವಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಸಂಸದ ಮಾಣಿಕಂ ಟ್ಯಾಗೋರ್ ತಮ್ಮ ನೋಟಿಸ್‌ನಲ್ಲಿ ಮನವಿ ಮಾಡಿದ್ದಾರೆ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಸರ್ಕಾರ ಕ್ರಮಕೈಗೊಳ್ಳುವಂತೆ ಸೂಚಿಸಬೇಕು ಎಂದರು.
ಅದಾನಿ ಗ್ರೂಪ್​ನಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಯಬೇಕೆಂದು ಪ್ರತಿಪಕ್ಷ ಸದಸ್ಯರು ಭಾರಿ ಗದ್ದಲವೆಬ್ಬಿಸಿದ್ದರಿಂದ ಸಂಸತ್ತಿನ ಉಭಯ ಸದನಗಳನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಗಿದೆ. ಬಜೆಟ್ ಅಧಿವೇಶನದ ಸಂಸತ್ ಕಲಾಪ ಪುನರಾರಂಭವಾಗುತ್ತಿದ್ದಂತೆ ಸದನದಲ್ಲಿ ಅದಾನಿ ಹಗರಣದ ವಿಷಯದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಸ್ತಾವನೆ ಮಂಡಿಸಿದರು. ಅದಾನಿ ಸಮೂಹಕ್ಕೆ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ನೀಡಿರುವ ಸಾಲಗಳ ಬಗ್ಗೆ ಪರಿಶೀಲನೆ ನಡೆಯಲಿ ಎಂದು ಪ್ರತಿಪಕ್ಷಗಳ ಸದಸ್ಯರು ಆಗ್ರಹಿಸಿದರು.

Exit mobile version