Home ಸುದ್ದಿ ದೇಶ ಬೀದಿ ನಾಯಿ ಪ್ರಕರಣ: ಸುಪ್ರೀಂಕೋರ್ಟ್‌ ಹೊಸ ಆದೇಶ

ಬೀದಿ ನಾಯಿ ಪ್ರಕರಣ: ಸುಪ್ರೀಂಕೋರ್ಟ್‌ ಹೊಸ ಆದೇಶ

0

ನವ ದೆಹಲಿ: ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಶಾಶ್ವತವಾಗಿ ಸ್ಥಳಾಂತರಿಸುವ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶವನ್ನು ಬದಲಾಯಿಸಿ, ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಆಗಸ್ಟ್ 11ರ ಆದೇಶದಲ್ಲಿ ಬೀದಿ ನಾಯಿಗಳನ್ನು ಹಿಡಿದು ಶಾಶ್ವತವಾಗಿ ಆಶ್ರಯ ತಾಣಗಳಿಗೆ ಕಳುಹಿಸುವಂತೆ ನಿರ್ದೇಶಿಸಲಾಗಿತ್ತು. ಆದರೆ, ಪ್ರಾಣಿ ಹಿತಾಸಕ್ತಿ ಸಂಘಟನೆಗಳ ಪ್ರತಿಭಟನೆ ಮತ್ತು ದೇಶಾದ್ಯಂತ ಶ್ವಾನ ಪ್ರಿಯರ ಆಕ್ರೋಶದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಹೊಸ ಆದೇಶ ಹೊರಡಿಸಿದೆ.

ಹೊಸ ಮಾರ್ಗಸೂಚಿಯ ಪ್ರಮುಖ ಅಂಶಗಳು

ಸಂತಾನ ಹರಣ ಮತ್ತು ರೋಗ ನಿರೋಧಕತೆ (Sterilization & Vaccination) ಪೂರ್ಣಗೊಂಡ ನಂತರ ಬೀದಿ ನಾಯಿಗಳನ್ನು ಮತ್ತೆ ಹಿಂದಿನ ಪ್ರದೇಶಗಳಿಗೆ ಬಿಡಲು ಅವಕಾಶ. ರೇಬೀಸ್ ಸೋಂಕಿತ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಲ್ಲಿ ಉಳಿಸಬೇಕು. ಎಲ್ಲ ರಾಜ್ಯ ಸರ್ಕಾರಗಳಿಗೆ ಈ ಕುರಿತು ತುರ್ತು ಕ್ರಮ ಕೈಗೊಳ್ಳಲು ಸೂಚನೆ.

ನಾಯಿಗಳಿಗೆ ಆಹಾರ ಕೇಂದ್ರಗಳು (Feeding Zones) ನಿರ್ಮಿಸುವಂತೆ ಆದೇಶ – ಪುರಸಭೆಗಳ ಪ್ರತಿಯೊಂದು ವಾರ್ಡ್‌ಗಳಲ್ಲಿ ಆಹಾರ ನೀಡುವ ವಿಶೇಷ ಪ್ರದೇಶಗಳನ್ನು ಗೊತ್ತುಪಡಿಸಬೇಕು. ಸಾರ್ವಜನಿಕವಾಗಿ ನಿಯಂತ್ರಣವಿಲ್ಲದೆ ನಾಯಿಗಳಿಗೆ ಆಹಾರ ನೀಡುವುದನ್ನು ತಡೆಯಲು ಸೂಚನೆ. ನಿಯಮ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.

ದತ್ತು ಮತ್ತು ಹಣಕಾಸು ಠೇವಣಿ ನಿಯಮ: ನಾಯಿಗಳನ್ನು ದತ್ತು ಪಡೆಯಲು ಬಯಸುವ ಪ್ರಾಣಿ ಪ್ರಿಯರು ಅರ್ಜಿ ಸಲ್ಲಿಸಬಹುದು. ಆದರೆ, ಅವರು ದತ್ತು ಪಡೆದ ನಾಯಿಗಳನ್ನು ಮತ್ತೆ ಬೀದಿಗೆ ಬಿಡದಂತೆ ನೋಡಿಕೊಳ್ಳುವುದು ಅವರ ಪೂರ್ಣ ಜವಾಬ್ದಾರಿ. ಇದಕ್ಕಾಗಿ, ವೈಯಕ್ತಿಕ ಅರ್ಜಿದಾರರು ₹25,000 ಠೇವಣಿ ಇಡಬೇಕು. ಎನ್‌ಜಿಒಗಳು ₹2 ಲಕ್ಷ ಠೇವಣಿ ಇಡಬೇಕು. ಈ ಮೊತ್ತವನ್ನು ಶ್ವಾನ ಆಶ್ರಯಗಳ ನಿರ್ಮಾಣ ಮತ್ತು ನಿರ್ವಹಣೆಗೆ ಬಳಸಲಾಗುವುದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

ಸುಪ್ರೀಂ ಕೋರ್ಟ್‌ನ ಈ ಹೊಸ ತೀರ್ಪು ನಾಯಿಗಳನ್ನು ಸಂಪೂರ್ಣವಾಗಿ ಆಶ್ರಯಗಳಿಗೆ ಸ್ಥಳಾಂತರಿಸುವ ಬದಲಿಗೆ, ಅವುಗಳ ಸಂತಾನಹರಣ, ಲಸಿಕೆ ಹಾಗೂ ನಿಯಂತ್ರಿತ ಆಹಾರ ವ್ಯವಸ್ಥೆ ಮೂಲಕ ನಿಯಂತ್ರಣ ಮತ್ತು ರಕ್ಷಣೆ ಒದಗಿಸುವತ್ತ ಗಮನ ಹರಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version