Home News ದಸರಾದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರದ ಒಪ್ಪಿಗೆ

ದಸರಾದಲ್ಲಿ ವೈಮಾನಿಕ ಪ್ರದರ್ಶನಕ್ಕೆ ಕೇಂದ್ರದ ಒಪ್ಪಿಗೆ

ನವದೆಹಲಿ: ಮೈಸೂರು ದಸರಾ ಉತ್ಸವದಲ್ಲಿ ವೈಮಾನಿಕ ಪ್ರದರ್ಶನ ಹಾಗೂ ಬೆಂಗಳೂರಿನಲ್ಲಿ ಎರಡು ಡಿಫೆನ್ಸ್ ಕಾರಿಡಾರ್ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ರಕ್ಷಣಾ ಇಲಾಖೆಯ ಜಾಗ ನೀಡುವ ಸರ್ಕಾರದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ರಕ್ಷಣಾ ಸಚಿವ ರಾಜನಾಥಸಿಂಗ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ತಮಿಳುನಾಡು ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರಕ್ಷಣಾ ಕಾರಿಡಾರ್ ಸ್ಥಾಪನೆ ಹಾಗೂ ಸುರಂಗರಸ್ತೆ ಯೋಜನೆ, ಬಳ್ಳಾರಿ ರಸ್ತೆಯಲ್ಲಿ ಲಿಂಕ್ ರೋಡ್, ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಯೋಜನೆಯ ನಿರ್ಮಾಣಕ್ಕೆ ಅವಶ್ಯವಿರುವ ಕೇಂದ್ರ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ನೀಡುವಂತೆ ಕೋರಿ ಮನವಿ ಸಲ್ಲಿಸಿರುವುದಾಗಿ ಸಿದ್ದರಾಮಯ್ಯ ವಿವರಿಸಿದರು.

ಸಮಗ್ರ ಕರ್ನಾಟಕಕ್ಕೆ ಆದ್ಯತೆ
ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಜಿಲ್ಲೆಗಳಿಗೆ ಕೇಂದ್ರ ಸರ್ಕಾರವು ಎರಡು ಪ್ರತ್ಯೇಕ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಲು ಮನವಿ ಮಾಡಲಾಗಿದೆ. ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕ ಶೇ.೭೫ರಷ್ಟು ಪಾಲು ಹೊಂದಿದ್ದು, ಜಾಗತಿಕವಾಗಿ ೩ನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿದೆ. ಹೀಗಾಗಿ, ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಿದರೆ, ಇದು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೂ ಬಲ ತುಂಬುತ್ತದೆ ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ್ ಕೂಡ ಪೂರಕ ಮಾಹಿತಿ ಒದಗಿಸಿದರು.

ರಕ್ಷಣಾ ಕ್ಷೇತ್ರಕ್ಕೆ ಪೂರಕ ಹೂಡಿಕೆ
ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳಾದ ಬಾಲೂ ಫೋರ್ಜ್, ಏಕಸ್, ಬಿಕಾರ್ ಏರೋಸ್ಪೇಸ್, ವಾಲ್‌ಚಂದ್ ನಗರ್ ಇಂಡಸ್ಟ್ರಿಸ್ ನೆಲೆಯೂರಿವೆ. ಬೆಳಗಾವಿಯಲ್ಲಿ ೨೫೦ ಎಕರೆಯಲ್ಲಿ ದೇಶದ ಪ್ರಪ್ರಥಮ ಪ್ರಿಸಿಶನ್ ಉತ್ಪಾದನೆಯ ವಿಶೇಷ ಆರ್ಥಿಕ ವಲಯವು ಸಕ್ರಿಯವಾಗಿದೆ. ಇಲ್ಲಿ ೩೧ ಘಟಕಗಳಿದ್ದು, ೫ ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ. ದಕ್ಷಿಣದ ೩ ಜಿಲ್ಲೆಗಳಲ್ಲಿ ಎಚ್‌ಎಎಲ್, ಕಾಲಿನ್ಸ್ ಏರೋಸ್ಪೇಸ್, ಡೈನಮ್ಯಾಟಿಕ್ ಟೆಕ್ನಾಲಜೀಸ್, ಸೆಂಟಮ್, ಸಾಸ್ಮೋಸ್, ಬೆಲ್ಲಾಟ್ರಿಕ್ಸ್ ಇವೆ. ಇವುಗಳೊಂದಿಗೆ ಟಿಎಎಸ್‌ಎಲ್ ತನ್ನ ಅಂತಿಮ ಜೋಡಣಾ ಘಟಕವನ್ನು ಆರಂಭಿಸುತ್ತಿದೆ. ಏರ್ ಇಂಡಿಯಾ ಮತ್ತು ಇಂಡಿಗೋ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ. ದೇವನಹಳ್ಳಿಯಲ್ಲಿ ೨ ಸಾವಿರ ಎಕರೆ ವಿಸ್ತಾರದ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಇದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್ ಮತ್ತು ಸ್ಪೇಸ್‌ಕ್ರಾಫ್ಟ್ ವಲಯದ ಶೇಕಡ ೨೫ರಷ್ಟು ತಯಾರಿಕೆ ನಡೆಯುತ್ತಿದೆ. ಎಂದು ರಕ್ಷಣಾ ಸಚಿವ ರಾಜನಾಥ್ ಗಮನಕ್ಕೆ ತರಲಾಗಿದೆ.

Exit mobile version