ಬೆಂಗಳೂರು: ಕನ್ನಡ ಭಾಷಾ ಪರೀಕ್ಷೆ ಸೇರಿದಂತೆ ವಿವಿಧ ಕಾರಣಕ್ಕೆ ಕರ್ನಾಟಕ ಲೋಕಾಸೇವಾ ಆಯೋಗ (ಕೆಪಿಎಸ್‌ಸಿ)ಯ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ಭಾರೀ ಸುದ್ದಿಯಾಗಿತ್ತು. ಈಗ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದಾಗಿ ಕೆಎಎಸ್ ನೇಮಕಾತಿಗಾಗಿ ಕಾದು ಕುಳಿತ ಅಭ್ಯರ್ಥಿಗಳಿಗೆ ನಿರಾಸೆಯಾಗಿದೆ.
ಕೆಎಎಸ್ ನೇಮಕಾತಿ ಮೀಸಲಾತಿಯನ್ನು ಶೇ 56ಕ್ಕೆ ಹೆಚ್ಚಿಸಲಾಗಿತ್ತು. ಇದನ್ನು ಮಧು ಬಿ. ಎನ್. ಎಂಬುವವರು ಕೆಎಟಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅರ್ಜಿ ವಿಚಾರಣೆಗೊಳಿಸಿದ ಕೆಎಟಿ ನೇಮಕಾತಿಯನ್ನು ಅಮಾನ್ಯಗೊಳಿಸಿದೆ.
384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಪೂರ್ವಭಾವಿ ಪರೀಕ್ಷೆ, ಎರಡು ತಿಂಗಳ ಹಿಂದೆ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಗಳ ಮೌಲ್ಯ ಮಾಪನ ನಡೆಯುತ್ತಿದ್ದು, ಅಭ್ಯರ್ಥಿಗಳು ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಆದರೆ ಈಗ ಕೆಎಟಿ ಆದೇಶದ ಕಾರಣ ಮೌಲ್ಯ ಮಾಪನ ಸ್ಥಗಿತವಾಗಿದೆ.
ಆದ್ದರಿಂದ ಅಭ್ಯರ್ಥಿಗಳು ಮುಂದೇನು? ಎಂದು ಕಾದು ಕುಳಿತಿದ್ದಾರೆ. ಕರ್ನಾಟಕ ಸರ್ಕಾರ ಕೆಎಟಿ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಕೆ ಮಾಡಿದೆ. ಈ ವಾರ ಅರ್ಜಿಯ ವಿಚಾರಣೆ ನಡೆಯುವ ನಿರೀಕ್ಷೆ ಇದೆ. ಈ ಹಂತದಲ್ಲಿ ಮುಂದೆ ಏನಾಗಲಿದೆ? ಎಂದು ಅಭ್ಯರ್ಥಿಗಳಿಗೆ ಯಾವುದೇ ಭರವಸೆ ನೀಡುವುದು ಸಾಧ್ಯವಿಲ್ಲ.
ಪತ್ರಿಕೆಗಳ ಮೌಲ್ಯ ಮಾಪನ ಮಾಡಿದ ನಂತರ ವ್ಯತಿರಿಕ್ತ ಆದೇಶ ಬಂದರೆ ವೆಚ್ಚ ಹೆಚ್ಚಾಗಲಿದೆ ಎಂಬ ಕಾರಣಕ್ಕೆ ಸಂಪೂರ್ಣ ಮೌಲ್ಯ ಮಾಪನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗೆ ಒಂದೂವರೆ ವರ್ಷದ ಹಿಂದೆ ಅಧಿಸೂಚನೆ ಹೊರಡಿಸಲಾಯಿತು. ಬಳಿಕ ಪೂರ್ವಭಾವಿ ಪರೀಕ್ಷೆಯಲ್ಲಿನ ಕನ್ನಡ ತಪ್ಪಿನ ಕಾರಣಕ್ಕೆ ಎರಡು ಬಾರಿ ಪರೀಕ್ಷೆಯನ್ನು ನಡೆಸಲಾಯಿತು.
ಮೇ ಮೊದಲ ವಾರದಲ್ಲಿ ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆಯನ್ನು ನಡೆಸಿತ್ತು. ಆದರೆ ಈಗ ಕೆಎಟಿ ಆದೇಶದ ಕಾರಣ ಮುಖ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಯ ಮೌಲ್ಯ ಮಾಪನ ಸ್ಥಗಿತಗೊಳಿಸಲಾಗಿದೆ.
ಈಗ ಕರ್ನಾಟಕ ಹೈಕೋರ್ಟ್‌ನಲ್ಲಿ ಸರ್ಕಾರ ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆ ನಡೆದು ಫಲಿತಾಂಶ ಯಾವಾಗ ಹೊರಬರಲಿದೆ? ಎಂಬುದು ತಿಳಿದಿಲ್ಲ. ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಅನಿರ್ದಿಷ್ಟಾವಧಿ ಕಾಯಬೇಕಿದೆ.
ಕೆಪಿಎಸ್‌ಸಿ 384 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿ ವಿಷಯದಲ್ಲಿ ಮಾಡಿದ ಯಡವಟ್ಟುಗಳು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕೆಪಿಎಸ್‌ಸಿಯಲ್ಲಿ ಬದಲಾವಣೆ ತರಬೇಕು ಎಂದು ಸರ್ಕಾರವನ್ನ ಒತ್ತಾಯಿಸಲಾಗಿತ್ತು.