Home ತಾಜಾ ಸುದ್ದಿ ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ದರ್ಶನಕ್ಕೆ ಜನವೋ ಜನ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ದರ್ಶನಕ್ಕೆ ಜನವೋ ಜನ

0

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಸಂಭ್ರಮ ಮನೆ ಮಾಡಿದ್ದು, ಎರಡನೇ ವರ್ಷ ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಹತ್ತಿರದ (ಈದ್ಗಾ) ಮೈದಾನದಲ್ಲಿ ರಾಣಿ ಚನ್ನಮ್ಮ ಗಣೇಶೋತ್ಸವ ಮಹಾಮಂಡಳಿ ಪ್ರತಿಷ್ಠಾಪನೆ ಮಾಡಿರುವ ಗಣೇಶಮೂರ್ತಿ ದರ್ಶನಕ್ಕೆ ಜನ ಜಂಗುಳಿ ಏರ್ಪಟ್ಟಿತ್ತು.
ಮಂಗಳವಾರ ಮೊದಲ ದಿನವೇ ಸಂಜೆಯಿಂದ ಹೆಚ್ಚಿನ ಜನ ಈದ್ಗಾ ಮೈದಾನದತ್ತ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡಿದರು. ಅಲ್ಲದೆ, ಬುಧವಾರ ಬೆಳಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದರ್ಶನ ಪಡೆದರಲ್ಲದೆ, ಪೂಜೆ, ಸಂಕಲ್ಪ ಮಾಡಿ ಭಕ್ತಿ ಮೆರೆದರು.
ಮೊದಲ ದಿನ ಜನಪ್ರತಿನಿಧಿಗಳು ದರ್ಶನ ಪಡೆದರೆ, ಎರಡನೇ ದಿನವಾದ ಬುಧವಾರ ಉದ್ಯಮಿ ವಿಜಯ ಸಂಕೇಶ್ವರ ಅವರು ಗಣೇಶ ದರ್ಶನ ಪಡೆದರು. ಸಂಜೆ ಗಣಹೋಮ, ಮಹಿಳಾ ಭಜನಾ ಮಂಡಳಿ ಸೇರಿ ಐದಾರು ಭಜನಾ ಮಂಡಳಿಗಳಿಂದ ಭಜನೆ ನಡೆಯಿತು. ಸಂಜೆ ೬ ಗಂಟೆಗೆ ವಾರಕರಿ ಜರುಗಿತು. ೭ ಗಂಟೆಗೆ ಕಾಶಿ ಮಾದರಿಯಲ್ಲಿ ಗಣೇಶನಿಗೆ ಗಂಗಾರತಿ ನಡೆಯಿತು. ಎರಡು ದಿನಗಳ ಕಾಲ ಗಣೇಶ ಮೂರ್ತಿ ದರ್ಶನಕ್ಕೆ ಆಗಮಿಸಿದ್ದ ಸಾರ್ವಜನಿಕರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಸುಮಾರು ೧೫ ಸಾವಿರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರೆ, ಬುಧವಾರ ಮಧ್ಯಾಹ್ನದವರೆಗೆ ೧೦ ಸಾವಿರ ಹಾಗೂ ರಾತ್ರಿ ಸೇರಿ ೨೦ ಸಾವಿರ ಜನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ.

ಆರ್‌ಎಸ್‌ಎಸ್‌ನಿಂದ ಗಣೇಶಮೂರ್ತಿಗೆ ವಂದನೆ
ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಹತ್ತಿರದ (ಈದ್ಗಾ) ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ೮ ಕ್ಕೆ ಆರ್‌ಎಸ್‌ಎಸ್‌ನಿಂದ ಗಣಪತಿ ವಂದನಾ ಸಲ್ಲಿಸಲಾಯಿತು. ಆರ್‌ಎಸ್‌ಎಸ್ ಗಣವೇಷಧಾರಿಗಳಿಂದ ಕವಾಯತ್ ನಡೆಯಿತು. ಆಕರ್ಷಕವಾಗಿ ಡ್ರಮ್ ಬಾರಿಸುವ ಮೂಲಕ ಗಣಪತಿ ವಂದನಾ ಸಲ್ಲಿಸಲಾಯಿತು.

Exit mobile version