Home ತಾಜಾ ಸುದ್ದಿ ಹಾವಿಗೆ ಬರಬೇಡ ಎನ್ನಲು ಗೆದ್ದಲಿಗೆ ಧ್ವನಿ ಇಲ್ಲ; ಸಂಶಯವಿದ್ದರೆ ಡಿಸಿಎಂಗೆ ಕೇಳಿ ಎಂದ ಬಿಜೆಪಿ

ಹಾವಿಗೆ ಬರಬೇಡ ಎನ್ನಲು ಗೆದ್ದಲಿಗೆ ಧ್ವನಿ ಇಲ್ಲ; ಸಂಶಯವಿದ್ದರೆ ಡಿಸಿಎಂಗೆ ಕೇಳಿ ಎಂದ ಬಿಜೆಪಿ

0

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿ ಮಾಡಿದ್ದ ಟ್ವೀಟ್‌ಗೆ ಕರ್ನಾಟಕ ಬಿಜೆಪಿ ಇಂದು ಉತ್ತರ ನೀಡಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕರ್ನಾಟಕ ಬಿಜೆಪಿ, ಪುಕ್ಕಟೆ ಪ್ರಚಾರ ಪಡೆಯುವುದು, ಜ್ವಲಂತ ಸಮಸ್ಯೆಗಳನ್ನು ಪರಿಹರಿಸದೆ ಜನರ ಗಮನ ಬೇರೆಡೆ ಸೆಳೆದು ಕಣ್ಕಟ್ಟು ಮಾಡುವುದು, ಮತ್ತೊಬ್ಬರ ಸಾಧನೆಯನ್ನು ತನ್ನದೆಂದು ಹೇಳಿಕೊಂಡು ತಿರುಗಾಡುವುದು, ಕೋಮುದ್ವೇಷದ ವಿಷಬೀಜ ಬಿತ್ತಿ ನೀರೆರೆಯುವುದು, ದಿಟ್ಟ ಪ್ರಶ್ನೆಗಳು ಎದುರಾದಾಗ ಜಾಗ ಖಾಲಿ ಮಾಡುವುದು. ಇವು ಸಿದ್ದರಾಮಯ್ಯರವರ ಐದು ಗ್ಯಾರಂಟಿ ಗುಣಗಳು ಎಂದು ಹೇಳಿದೆ.

ಗೆದ್ದಲು ಕಷ್ಟ ಪಟ್ಟು ಹುತ್ತ ಕಟ್ಟುತ್ತದೆ. ಹುತ್ತ ಕಟ್ಟಲು ಯಾವುದೇ ರೀತಿಯಲ್ಲಿಯೂ ಸಾಮರ್ಥ್ಯವಿಲ್ಲದ ಹಾವು ಮಾತ್ರ ಕಟ್ಟುವ ಕಾರ್ಯವೆಲ್ಲಾ ಮುಗಿದ ಮೇಲೆ ಹುತ್ತದೊಳಗೆ ಕೂರುತ್ತದೆ. ದರ್ಪದ ಹಾವನ್ನು ಬರಬೇಡ ಎನ್ನಲು ಗೆದ್ದಲಿಗೆ ಧ್ವನಿಯಿರುವುದಿಲ್ಲ. ಸಂಶಯಗಳಿದ್ದರೆ, ಉಪಮುಖ್ಯಮಂತ್ರಿ ಸ್ಥಾನಕ್ಕಷ್ಟೇ ತೃಪ್ತಿ ಪಟ್ಟುಕೊಳ್ಳಬೇಕಾದ ಅನಿವಾರ್ಯತೆಗೆ ಬಿದ್ದವರನ್ನು ಸಂಪರ್ಕಿಸಿ ಎಂದಿದೆ.

ಬಿಜೆಪಿ ಸರ್ಕಾರ ಒದಗಿಸಿದ ಮೂಲಭೂತ ಸೌಕರ್ಯಗಳು ಮತ್ತು ಮಾಡಿದ ಅಭಿವೃದ್ಧಿ ಕಾರ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯುವ ಒಂದೇ ಕಾರಣಕ್ಕೆ ಸಿದ್ದರಾಮಯ್ಯರವರು ಗ್ಯಾರಂಟಿಗಳನ್ನು ಘೋಷಿಸಿದರು. ಅವುಗಳ ಅನುಷ್ಠಾನ ಇಂದಿಗೂ ಸಮರ್ಪಕವಾಗಿ ಆಗದಿರುವುದೇ ಇದಕ್ಕೆ ಪ್ರತ್ಯಕ್ಷ ಉದಾಹರಣೆ. ಇದೀಗ ದೋಷಪೂರಿತ ಅನುಷ್ಠಾನ ಮತ್ತು ಅಸಮರ್ಪಕ ನಿರ್ವಹಣೆಗಳು ಜನರ ಗಮನಕ್ಕೆ ಬಾರದಿರಲಿ ಎಂದು ಸಿದ್ದರಾಮಯ್ಯ ಹೊಸ ಸೂತ್ರ ಕಂಡುಕೊಂಡಿದ್ದಾರೆ. ಮೊದಲಿಗೆ ಗ್ಯಾರಂಟಿಗಳ ಜಾರಿಯನ್ನೇ ಸಾಧ್ಯವಾದಷ್ಟೂ ಮುಂದೂಡಿ ಈಗ ಕಂತಿನ ರೂಪದಲ್ಲಿ ಕೊಡುತ್ತೇವೆ ಎಂದು ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ.

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ಕೋವಿಡ್‌ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿತು. ಅಲ್ಲದೆ ಅವರ ಸಮರ್ಥ ನೀತಿಗಳಿಂದಾಗಿ ಆರ್ಥಿಕ ಬೆಳವಣಿಗೆಯಲ್ಲಿ ಇಂದು ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳನ್ನೂ ಮೀರಿಸುತ್ತಿದೆ. ಇದರ ಅತಿಹೆಚ್ಚಿನ ಲಾಭವನ್ನು ಕರ್ನಾಟಕ ಪಡೆಯಲು ಬೇಕಾದ ಕಾರ್ಯಗಳನ್ನು ಈ ಹಿಂದಿನ ಬಿಜೆಪಿ ಸರ್ಕಾರ ಮಾಡಿತು. ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಉಳಿತಾಯ ಬಜೆಟ್‌ ಮಂಡಿಸಿ ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ದಾರಿ ಮಾಡಿಕೊಟ್ಟಿತು.

ಆದರೆ ನಾಮಕಾವಸ್ತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ತಾವೇ ಘೋಷಿಸಿದ ಗ್ಯಾರಂಟಿಗಳನ್ನೇ ಸರಿದೂಗಿಸಲು ಇನ್ನೂ ಹೆಣಗಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಎಲ್ಲಾ ಜನಪರ ಯೋಜನೆಗಳಿಗೆ ಈಗಾಗಲೇ ಎಳ್ಳು-ನೀರು ಬಿಟ್ಟದ್ದಾಗಿದೆ. ಆದಾಗ್ಯೂ ಬಿಜೆಪಿ ಸರ್ಕಾರದ ಬಳುವಳಿಯಾಗಿ ಬಂದ ಆರ್ಥಿಕ ಪ್ರಗತಿಗೆ ಮಾನ್ಯ ಮುಖ್ಯಮಂತ್ರಿಗಳು ತಮ್ಮ ಹೆಸರು ಅಂಟಿಸಿಕೊಂಡದ್ದು ಅವರ ಕಲೆಗಾರಿಕೆಯ ಪರಾಕಾಷ್ಠೆ ಎಂದು ಹೇಳಿದೆ.

ಕೇಂದ್ರದ ಮೋದಿ ಅವರ ಸರ್ಕಾರ ಬಡ ಕನ್ನಡಿಗರಿಗೆ ಅನೂಚಾನವಾಗಿ ಕೊಡುತ್ತಾ ಬಂದಿರುವ 5ಕೆಜಿ ಅಕ್ಕಿಯನ್ನು “ತಾನೇ ಖುದ್ದು ಗದ್ದೆ ನಾಟಿ ಮಾಡಿ, ಕಳೆ ಕಿತ್ತು, ಕಟಾವು ಮಾಡಿ, ಭತ್ತದಿಂದ ಅಕ್ಕಿ ತೆಗೆದುಕೊಟ್ಟೆ” ಎನ್ನುವ ರೀತಿ ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವ ಕಲೆ ಸಿದ್ಧಿಸಿರುವುದೂ ಸಿದ್ದರಾಮಯ್ಯರವರಿಗೇ.

ಏಕೆಂದರೆ ಅವರು ಘೋಷಿಸಿದ 10 ಕೆಜಿ ಅಕ್ಕಿಯಲ್ಲಿ ಒಂದು ಹಿಡಿಯೂ ಇನ್ನೂ ಕರ್ನಾಟಕದಲ್ಲಿ ಯಾವೊಬ್ಬರಿಗೂ ಸಿಕ್ಕಿಲ್ಲ. ಕೇಂದ್ರ ಸರ್ಕಾರ ನೀಡುತ್ತಿರುವ ಐದು ಕೆಜಿಯನ್ನೂ ಮೂರಕ್ಕೆ ಇಳಿಸಿ ಉಳಿದ ಎರಡು ಕೆಜಿ ರಾಗಿ ಕೊಟ್ಟು ಜನರನ್ನು ಸಾಗಹಾಕಲಾಗುತ್ತಿದೆ.

ಕೋಮು ವಿಷವನ್ನು ಸಮಾಜದಲ್ಲಿ ಸದಾಕಾಲ ಬಿತ್ತುವುದು ಸಿದ್ದರಾಮಯ್ಯನವರು ನಿರಂತರವಾಗಿ ಕಾರ್ಯರೂಪಕ್ಕೆ ತಂದ ಮತ್ತೊಂದು ಸೂತ್ರ. ನಾನು ತಿಲಕ ಇಡುವುದಿಲ್ಲ, ನಾನು ಕೇಸರಿ ಪೇಟ ತೊಡುವುದಿಲ್ಲ, ನಾನು ಬಹುಸಂಖ್ಯಾತ ಜನತೆಯ ಭಾವನೆಗೆ ಬೇಕೆಂದೇ ತಿವಿಯುತ್ತೇನೆ ಎನ್ನುವ ಜಾಯಮಾನ ಜನಾಬ್ ಸಿದ್ದರಾಮಯ್ಯರವರದು.

ಅವಕಾಶ ಸಿಕ್ಕಾಗಲೆಲ್ಲ ಜನತೆಯ ಶ್ರದ್ಧೆ ನಂಬಿಕೆಗಳನ್ನು ಕುಹಕವಾಡುವ ಹೀನ ಮನಃಸ್ಥಿತಿಯ ಜನಾಬರ ಮೈಯಲ್ಲಿ ಹರಿಯುವ ನೆತ್ತರು ಎಲ್ಲ ಮನುಷ್ಯರಂತೆ ಕೆಂಪೋ ಅಥವಾ ಹಸಿರೋ ಎಂಬ ಅನುಮಾನ ಬಂದರೂ ಅಚ್ಚರಿಯಿಲ್ಲ. ಆದರೆ ನಿಮ್ಮ ಅನುಮಾನಕ್ಕೆ ಜನಾಬ್‌ ಸಿದ್ದರಾಮಯ್ಯರವರು ಉತ್ತರ ಹೇಳುವುದಿಲ್ಲ. ಏಕೆಂದರೆ ಅವರಿಗೆ ಅನಾನುಕೂಲಕರ ಪ್ರಶ್ನೆ ಬಂದಾಗಲೆಲ್ಲಾ ಉತ್ತರಿಸದೆಯೇ ಜಾಗ ಖಾಲಿ ಮಾಡುವ ವಿದ್ಯೆಯನ್ನೂ ಜನಾಬರು ಸಿದ್ಧಿಸಿಕೊಂಡಿದ್ದಾರೆ.

“ನಂದಿನಿ-ಅಮುಲ್‌, ರಾಜ್ಯ-ಹೊರರಾಜ್ಯ” ಅಂತ ಚುನಾವಣೆಗೂ ಮುನ್ನ ಕನ್ನಡಿಗರ ಭಾವನೆಗಳನ್ನು ಕೆರಳಿಸಿ, ಆ ಕಿಚ್ಚಿನಿಂದ ತಮ್ಮ ಮೈ ಬೆಚ್ಚಗೆ ಮಾಡಿಕೊಂಡ ಕೀಳು ರಾಜಕೀಯವನ್ನು ಜನಾಬ್‌ ಸಿದ್ದರಾಮಯ್ಯರವರಿಂದಷ್ಟೇ ಮಾಡಲು ಸಾಧ್ಯ.

ಅಸಲಿಗೆ, ಅಮುಲ್ ಸಂಸ್ಥೆಗೆ ಪರಾಕು ಹೇಳಿ ಕರ್ನಾಟಕದ ಮಾರುಕಟ್ಟೆಗೆ ಅಮುಲ್ ಅನ್ನು ಬರಮಾಡಿಕೊಂಡಿದ್ದೇ ಸಿದ್ದರಾಮಯ್ಯರವರು. ಈ ವಿಚಾರ ಬಂದಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೆ ಉತ್ತರಕುಮಾರ ಸಿದ್ದರಾಮಯ್ಯರವರು ಬೆಬ್ಬೆಬ್ಬೆಬ್ಬೇ ಎಂದಿದ್ದನ್ನು ಕ್ಯಾಮೆರಾಗಳು ಶಾಶ್ವತವಾಗಿ ದಾಖಲಿಸಿಟ್ಟಿವೆ. ನಿಮ್ಮ ಈ ಎಲ್ಲಾ ಗುಣಗಳು ಈಗ ಗುಟ್ಟಾಗಿ ಉಳಿದಿಲ್ಲ. ಗುಣ ಮಾತ್ರವಲ್ಲ, ಅದರ ಪರಿಣಾಮವನ್ನೂ ರಾಜ್ಯದ ಜನ ಅನುಭವಿಸುತ್ತಿದ್ದಾರೆ. ಇಂಥ ಕಣ್ಣಿಗೆ ಮಣ್ಣೆರಚುವ ಆಟಗಳನ್ನು ಬದಿಗೊತ್ತಿ ಇನ್ನಾದರೂ ರಾಜ್ಯದ ಅಭಿವೃದ್ಧಿಗೆ ಏನು ಮಾಡಬೇಕೋ ಅದನ್ನು ಮಾಡಿ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯರವರಲ್ಲಿ ನಮ್ಮ ಕಳಕಳಿಯ ಮನವಿ.

Exit mobile version