ಬೆಳಗಾವಿ: ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ಕೇವಲ ಮಾಧ್ಯಮಗಳಲ್ಲಿ ಮಾತ್ರ ಬರುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಡಿಮಿಡಿಗೊಂಡ ಘಟನೆ ನಡೆದಿದೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿಎಂ ಬದಲಾವಣೆ ಪ್ರಶ್ನೆ ಕೇವಲ ಮಾಧ್ಯಮಗಳಲ್ಲಿ ಬರುತ್ತಿದೆಯೇ ಹೊರತು ಒಳಗಡೆ ಏನೂ ಕೇಳಿ ಬರುತ್ತಿಲ್ಲ. ಯಾವ ಸಚಿವರು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ನೀವು ಅವರನ್ನೇ ಕೇಳಿ. ಇನ್ನೂ ಯಾರಾದ್ರೂ ಸಚಿವರು ಆ ರೀತಿ ಹೇಳಿಕೆ ಕೊಟ್ಟಿದ್ದರೆ, ಅದನ್ನು ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತದೆ ಎಂದು ಹೆಬ್ಬಾಳ್ಕರ್ ಎಚ್ಚರಿಸಿದರು.
ಕರ್ನಾಟಕ ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಅವರಿಗೆ ಕೊಟ್ಟ ಭರವಸೆ ಈಡೇರಿಸುವತ್ತ ಮಾತ್ರ ನಾವು ಗಮನಹರಿಸುತ್ತೇವೆ. ಅದನ್ನು ಬಿಟ್ಟು ಬೇರೆ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರಾ ಅಥವಾ ಬದಲಾವಣೆ ಆಗುತ್ತಾರಾ ಎಂಬ ಪ್ರಶ್ನೆಗೆ ಅಸಮಾಧಾನಗೊಂಡ ಅವರು, ಈ ಪ್ರಶ್ನೆ ನನ್ನನ್ನು ನೀವು ಕೇಳುವುದೇ ತಪ್ಪು. ಈ ಬಗ್ಗೆ ಖರ್ಗೆ ಸಾಹೇಬರು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇ ಹೇಳಿಕೆಯನ್ನು ಕೊಡುವುದಿಲ್ಲ ಎಂದರು.