ಹುಬ್ಬಳ್ಳಿ: ಭವಿಷ್ಯದಲ್ಲಿ ಭಾರತವೇ ಪ್ರಮುಖ ಡಿಜಿಟಲೈಸ್ಡ್ ದೇಶವಾಗಿ ಹೊರಹೊಮ್ಮಲಿದೆ. ಆದರೆ, ತಂತ್ರಜ್ಞಾನ ಒಳ್ಳೆಯ ಕಾರ್ಯಕ್ಕೆ ಮಾತ್ರ ಬಳಕೆಯಾಗುವಂತಾಗಲಿ ಎಂಬುದು ನಮ್ಮ ಅಶಯ ಎಂದು ಇನ್ಫೋಸಿಸ್ ಸಂಸ್ಥೆಯ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.
ಇಲ್ಲಿನ ಗೋಕುಲ ರಸ್ತೆಯ ಇನ್ಫೋಸಿಸ್ ಸಂಸ್ಥೆಯ ಆವರಣದಲ್ಲಿ ದೇಶಪಾಂಡೆ ಫೌಂಡೇಶನ್ ಶನಿವಾರ ರಾತ್ರಿ ಆಯೋಜಿಸಿದ್ಧ `ಇವನಿಂಗ್ ವಿತ್ ಲೆಜೆಂಡ್ಸ್’ ಅಭಿವೃದ್ಧಿ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಂತ್ರಜ್ಞಾನ ಬಳಕೆಯು ಜಗತ್ತಿನಲ್ಲಿ ಸಾಕಷ್ಟು ಬೆಳವಣಿಗೆಗೆ ಕಾರಣವಾಗಿದೆ. ಸಾಕಷ್ಟು ಪ್ರಾಮುಖ್ಯತೆಯನ್ನೂ ಪಡೆದುಕೊಂಡಿದೆ. ಅದರಲ್ಲೂ ಭಾರತ ನಿರೀಕ್ಷೆ ಮೀರಿ ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ ಎಂದು ನುಡಿದ ಅವರು, ತಂತ್ರಜ್ಞಾನ ಕೆಟ್ಟವರ ಕೈಗೆ ಸಿಕ್ಕರೆ ಜಗತ್ತಿಗೆ ಒಳ್ಳೆಯದಾಗುವುದಿಲ್ಲ. ಒಳ್ಳೆಯದನ್ನು ಮಾಡಲು ಮಾತ್ರ ಬಳಕೆ ಆಗಬೇಕು ಎಂದು ಪ್ರತಿಪಾದಿಸಿದರು.
ಮುಂದಿನ ಐವತ್ತು ವರ್ಷದಲ್ಲಿ ಭಾರತ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಸಾಧಿಸಿರುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಂತರ ಸಾಕಷ್ಟು ಕಡಿಮೆಯಾಗಿರುತ್ತದೆ. ಜಗತ್ತಿನ ಇತರ ರಾಷ್ಟçಗಳಿಗೆ ಮಾದರಿಯಾಗುತ್ತದೆ ಎಂದು ಹೇಳಿದರು.
ರಾಧಾ ಬಸು ಮಾತನಾಡಿ, ದೇಶದ ಯುವಕರು ನಿತ್ಯ ಒಂದಿಲ್ಲೊAದು ಹೊಸತನ್ನು ಕಲಿಯುವಂತಾಗಬೇಕು. ಅವರ ಬದುಕು ಉತ್ತಮವಾಗಿರಬೇಕು ಎಂದು ನುಡಿದರು.
ಕೆನಡಾ ದೇಶದ ಪೌಲ್ ಮಾತನಾಡಿ, ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಸಮುದಾಯದವರಿಗೆ ವಿಫುಲ ಅವಕಾಶಗಳಿವೆ. ಆಸಕ್ತಿ ಬೆಳೆಸಿಕೊಂಡು ಆ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರೂಪಾ ಮತಿಜಾ ಉಪಸ್ಥಿತರಿದ್ದರು. ದೇಶಪಾಂಡೆ ಫೌಂಡೇಶನ್‌ನ ಸಹ ಸಂಸ್ಥಾಪಕ ಗುರುರಾಜ ದೇಶಪಾಂಡೆ ಸಂವಾದ ನಡೆಸಿಕೊಟ್ಟರು. ಸಂವಾದಕ್ಕೂ ಮುನ್ನ ಸಪ್ತ ಸಿತಾರ ವಾದಕರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಸಾಧಕರಿಗೆ ಸನ್ಮಾನ
ದೇಶಪಾಂಡೆ ಫೌಂಡೇಶನ್ ನೆರವಿನಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಭಾರತಿ, ವೈಭವಿ, ರುಕ್ಸಾನಾ, ಉಮಾ ಮಣಕವಾಡ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದೇಶಪಾಂಡೆ ಫೌಂಡೇಶನ್ ಸಿಇಓ ಸುನಿಲ್ ಚಕ್ರಪಾಣಿ ಸನ್ಮಾನಿಸಿದರು.