ಹುಬ್ಬಳ್ಳಿ: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆಯಂತಹ ಘಟನೆ ನಡೆದಾಗ ಯಾರು ಕೂಡ ತಾರತಮ್ಯ ಮಾಡೋಕೆ ಹೋಗುವುದಿಲ್ಲ. ಅಪರಾಧಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಪರಾಧಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ಕೆಲಸ ಪೊಲೀಸರು ಮಾಡಿದ್ದಾರೆ. ಇದರಲ್ಲಿ ತಾರತಮ್ಯದ ಪ್ರಶ್ನೆ ಬರೋದಿಲ್ಲ. ಘಟನೆ ನಡೆದ ಮೇಲೆ ಪೊಲೀಸರಿಗೆ ವಿಚಾರ ಗೊತ್ತಾಗಿ ಪ್ರಕರಣ ದಾಖಲಾದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಇಲಾಖೆ ಪ್ರಾಮಾಣಿಕ ಕಾರ್ಯ ಮಾಡಿದೆ ಎಂದರು.
ಹುಬ್ಬಳ್ಳಿಯ ವರೂರಿನ ಜೈನಮುನಿ108 ಗುಣಧರನಂದಿ ಮಹಾರಾಜರು ಉಪವಾಸ ಮಾಡಿದ್ದಾರೆ. ಅವರೊಂದಿಗೆ ಕಳೆದ ದಿನ ನಾನು ಸಹ ಮಾತನಾಡಿದ್ದೇನೆ. ಅವರ ಬೇಡಿಕೆಯನ್ನು ಕೇಳಿ ಭರವಸೆ ಕೊಡೋಕೆ ಬಂದಿದ್ದೇವೆ ಎಂದರು.
ಸಿಬಿಐ ತನಿಖೆಗೆ ಕೊಡಿ ಎಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪೊಲೀಸ್ ಇಲಾಖೆಯವರು ಸಮರ್ಥರಿದ್ದಾರೆ. ಅವರನ್ನು ಬಂಧಿಸಿದ್ದಾರೆ ತನಿಖೆ ಆರಂಭ ಆಗಿದೆ. ಸಿಬಿಐ ಅಥವಾ ಯಾವುದಕ್ಕೂ ಕೊಡುವ ಅಗತ್ಯ ಇಲ್ಲ. ನಮ್ಮ ಇಲಾಖೆ ತನಿಖೆ ಮುಗಿದ ಮೇಲೆ ಸತ್ಯಾಸತ್ಯತೆ ತಿಳಿದು ಬರುತ್ತದೆ. ಸುಮ್ಮನೆ ಆಪಾಧನೆ ಮಾಡುವುದು ಸರಿಯಲ್ಲ. ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಪೊಲೀಸರು ಪಕ್ಷಾತೀತವಾಗಿ ಪ್ರೆಶರ್ ಇಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಒಳಜಗಳವಿದೆ:
ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಒಳಜಗಳ ಇದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡೋಕೆ ಆಗುತ್ತಿಲ್ಲ ಎಂದು ಡಾ.ಜಿ.ಪರಮೇಶ್ವರ ಲೇವಡಿ ಮಾಡಿದರು.
ಒಂದು ವಾರ ಸಧನ ನಡೆದಿದೆ. ವಿರೋಧ ಪಕ್ಷದ ನಾಯಕ ಇಲ್ಲದೇ ನಡೆಸುತ್ತಿರುವುದು ಅವರ ಆಂತರಿಕ ಒಳ ಜಗಳ ತೋರಿಸುತ್ತದೆ. ಅವರಿಗೆ ಎಷ್ಟು ಜವಾಬ್ದಾರಿ ಇದೆ ಎಂಬುದನ್ನು ತೋರಿಸುತ್ತದೆ ಎಂದರು.