ನವದೆಹಲಿ: ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಬುಧವಾರ ಪ್ರಯಾಣ ಬೆಳೆಸಿದ್ದ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಗುರುವಾರ ಸಂಜೆ ತಮ್ಮ ಗಮ್ಯ ಸ್ಥಾನ ತಲುಪಿದ್ದಾರೆ. ಆ ಮೂಲಕ ಮೊಟ್ಟ ಮೊದಲ ಬಾರಿಗೆ ಭಾರತೀಯ ಗಗನಯಾತ್ರಿಯೊಬ್ಬರು ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರವೇಶಿಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ, ಬಾಹ್ಯಾಕಾಶದಲ್ಲಿ ನಡೆಯುವುದು, ತಿನ್ನುವುದು ಹೇಗೆ ಎಂದು ಮಗುವಿನಂತೆ ಕಲಿಯುತ್ತಿದ್ದೇನೆ ಎಂದು ಹೇಳಿದರು.
ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಹಾಗೂ ನಾಸಾ ಸಹಭಾಗಿತ್ವದ ಕಾರ್ಯಾಚರಣೆಯಾಗಿರುವ ಆಕ್ಸಿಯಮ್-೪ರ ಭಾಗವಾಗಿ ಭಾರತ, ಪೊಲ್ಯಾಂಡ್, ಹಂಗೇರಿ ಹಾಗೂ ಅಮೆರಿಕದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಕ್ರೂ ಡ್ರ‍್ಯಾಗನ್ ಕ್ಯಾಪ್ಸುಲ್ ಗುರುವಾರ ಸಂಜೆ ೪ ಗಂಟೆಯ ಸುಮಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯುವ ಮೂಲಕ ಡಾಕಿಂಗ್ ಪ್ರಕ್ರಿಯೆಯನ್ನು ಅತ್ಯಂತ ಯಶಸ್ವಿಯಾಗಿ ಹಾಗೂ ನಿಖರ ಲೆಕ್ಕಾಚಾರಗಳೊಂದಿಗೆ ಪೂರ್ಣಗೊಳಿಸಿತು. ಆ ಮೂಲಕ ಉತ್ತರ ಅಟ್ಲಾಂಟಿಖ್ ಮಹಾಸಾಗರದಿಂದ ೪೨೪ ಕಿ.ಮೀ ಎತ್ತರದ ೨೮ ಗಂಟೆಗಳ ಸುದೀರ್ಘ ಪಯಣವನ್ನು ಸುರಕ್ಷಿತವಾಗಿ ಅಂತ್ಯಗೊಳಿಸಿತು.
ಡಾಕಿಂಗ್ ಎಂದರೆ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣದ ಜತೆ ಸಂಪರ್ಕ ಸಾಧಿಸುವ ಪ್ರಕ್ರಿಯೆ. ಆದರೆ ಡಾಕಿಂಗ್ ಪ್ರಾರಂಭವಾಗುವುದಕ್ಕೂ ಮುನ್ನ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣದ ಜತೆ ಸಂಧಿಸಬೇಕು. ಅಂದರೆ, ಬಾಹ್ಯಾಕಾಶ ನೌಕೆ ಹಾಗೂ ನಿಲ್ದಾಣ ಒಂದೇ ಕ್ಷಕ್ಷೆಯ ಸಮತಲದಲ್ಲಿರಬೇಕು ಮತ್ತು ಪರಸ್ಪರ ಹತ್ತಿರದಲ್ಲಿಯೇ ಇರಬೇಕು.
ಗಗನಯಾತ್ರಿಗಳು ಮತ್ತು ಸರಕುಗಳ ವಿನಿಮಯವನ್ನು ಅನುಮತಿಸಲು ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ನಿಲ್ದಾಣದ ನಡುವೆ ಸುರಕ್ಷಿತ ಸಂಪರ್ಕವನ್ನು ದೃಢೀಕರಿಸಲಾಗುತ್ತದೆ. ಇದಕ್ಕಾಗಿ ನಿಖರವಾದ ಸ್ಥಳ, ವೇಗ ಹಾಗೂ ದಿಕ್ಕನ್ನು ಅನುಸರಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿದು ಭಾರತೀಯ ಕಾಲಮಾನ ಸಂಜೆ ೪.೦೧ಕ್ಕೆ ಬಾಹ್ಯಾಕಾಶ ನೌಕೆಯ ಸಾಫ್ಟ್ ಕ್ಯಾಪ್ಚರ್ ಅನ್ನು ಮಿಷನ್ ಕಂಟ್ರೋಲ್ ದೃಢಪಡಿಸಿತು.
ಸಾಫ್ಟ್ ಕ್ಯಾಪ್ಚರ್‌ನ ಕೆಲ ನಿಮಿಷಗಳ ನಂತರ ಹಾರ್ಡ್ ಕ್ಯಾಪ್ಚರ್ (ನಿಲ್ದಾಣದ ಜತೆಗಿನ ದೃಢವಾದ ಸಂಪರ್ಕ)ಅನ್ನು ದೃಢಪಡಿಸಲಾಯಿತು. ಇದರ ಬೆನ್ನಲ್ಲೇ ಡಾಕಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಗುರುವಾರ ಸಂಜೆ ೪.೧೫ರ ವೇಳೆಗೆ ನಾಸಾ ಪ್ರಕಟಿಸಿತು.
ಡಾಕಿಂಗ್ ಆದ ಕೆಲವೇ ನಿಮಿಷದಲ್ಲಿ `ನಾವು ಇಲ್ಲಿ ಇರುವುದಕ್ಕೆ ನಮಗೆ ಹೆಮ್ಮೆಯಿದೆ, ಧನ್ಯವಾದಗಳು’ ಎಂದು ಮಿಷನ್ ಕಮಾಂಡರ್ ಪೆಗ್ಗಿ ವಿಟ್ಸನ್ ನೇರಪ್ರಸಾರದಲ್ಲಿ ಹೇಳಿದರು.
ಬಾಹ್ಯಾಕಾಶದಲ್ಲೀಗ ಹನ್ನೊಂದು ಜನ
ಭಾರತದ ಶುಭಾಂಶು ಶುಕ್ಲಾ, ಅಮೆರಿಕದ ಪೆಗ್ಗಿ ವಿಟ್ಸನ್, ಪೋಲೆಂಡ್‌ನ ಸ್ಲಾವೋಜ್ ವಿಸ್ನಿವ್ಸ್ಕಿ ಹಂಗೇರಿಯ ಟಿಬೋರ್ ಕಾಪು ಸೇರಿದಂತೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಇನ್ನೂ ೭ ಜನ ಗಗನಯಾತ್ರಿಗಳು ಇದ್ದಾರೆ. ಇವರು ಎಕ್ಸ್ಪೆಡಿಶನ್ ೭೩ರ ಗಗನಯಾತ್ರಿಗಳಾಗಿದ್ದು, ಗುರುವಾರ ಶುಭಾಂಶು ಶುಕ್ಲಾ ಸೇರಿ ನಾಲ್ವರನ್ನು ಸ್ವಾಗತಿಸಿದರು ಹಾಗೂ ನಾವು ನಿಮ್ಮನ್ನು ಸ್ವಾಗತಿಸಲು ಬಹಳ ದಿನಗಳಿಂದ ಕಾತರದಿಂದ ಕಾದಿದ್ದೆವು ಎಂದು ಹೇಳಿದರು. ನೀವು ಅಸಾಧಾರಣ ಆತಿಥೇಯರು. ನಿಮ್ಮೊಂದಿಗೆ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಆಕ್ಸಿಯಮ್-೪ರ ಕಮಾಂಡರ್ ಹೇಳಿದರು. ಆಕ್ಸಿಯಮ್ ೪ರ ಗಗನಯಾತ್ರಿಗಳನ್ನೂ ಸೇರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈಗ ಒಟ್ಟು ೧೧ ಜನ ಗಗನಯಾತ್ರಿಗಳು ಇದ್ದಾರೆ.
ರಾತ್ರಿ ಚೆನ್ನಾಗಿ ನಿದ್ದೆ ಮಾಡಿದೆ
ಬಾಹ್ಯಾಕಾಶ ನಿಲ್ದಾಣದಲ್ಲಿ ಇಳಿಯುವುದಕ್ಕೂ ಕೆಲ ಗಂಟೆಗಳ ಮುಂಚೆ ಬಾಹ್ಯಾಕಾಶ ನೌಕೆಯಲ್ಲಿ ಕುಳಿತೇ ಮಾತನಾಡಿರುವ ಶುಭಾಂಶು ಶುಕ್ಲಾ ಅಲಿಯಾಸ್ ಶುಕ್ಸ್, ನಮಸ್ಕಾರ, ಇದು ಕೇವಲ ನನ್ನ ಸಾಧನೆಯಲ್ಲ. ದೇಶದ ಹಲವಾರು ಜನರ ಪರಿಶ್ರಮದಿಂದ ಸಾಧ್ಯವಾದ ಸಾಧನೆ. ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಬಾಹ್ಯಾಕಾಶದಲ್ಲಿ ಹೇಗೆ ನಡೆಯುವುದು, ತಿನ್ನುವುದು ಎಂಬುದನ್ನೆಲ್ಲ ಮಗುವಿನಂತೆ ಕಲಿಯುತ್ತಿದ್ದೇನೆ ಹಾಗೂ ಪ್ರತಿ ಕ್ಷಣವನ್ನೂ ಆನಂದಿಸುತ್ತಿದ್ದೇನೆ. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದೆ. ಇನ್ನು ಮುಂದೆ ಏನಾಗುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇನೆ. ಉನ್ನತ ವೈಜ್ಞಾನಿಕ ಗುರಿ ಸಾಧನೆಯ ಉದ್ದೇಶವನ್ನು ನಾವು ಹೊಂದಿದ್ದೇವೆ ಎಂದು ಹೇಳಿದ್ದಾರೆ.