Home ತಾಜಾ ಸುದ್ದಿ ಜಿಲ್ಲೆಯ ಭದ್ರಕೋಟೆ ವಶಪಡಿಸಿಕೊಂಡ ಕಾಂಗ್ರೆಸ್

ಜಿಲ್ಲೆಯ ಭದ್ರಕೋಟೆ ವಶಪಡಿಸಿಕೊಂಡ ಕಾಂಗ್ರೆಸ್

0

ದಾವಣಗೆರೆ: ಕಳೆದ ೨೦೦೮ ಮತ್ತು ೨೦೧೮ರ ವಿಧಾನಸಭಾ ಕ್ಷೇತ್ರ ಚುನಾವಣೆ ಅವಧಿ ಹೊರತುಪಡಿಸಿದರೆ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಜಿಲ್ಲೆಯನ್ನು ಈಗ ಮತ್ತೆ ಕಾಂಗ್ರೆಸ್ ತನ್ನ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ದಾವಣಗೆರೆಯ ಉತ್ತರ, ದಕ್ಷಿಣ, ಮಾಯಕೊಂಡ, ಜಗಳೂರು, ಚನ್ನಗಿರಿ ಹಾಗೂ ಹೊನ್ನಾಳಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿಜಯಮಾಲೆ ಹಾಕಿಕೊಂಡಿದ್ದು, ಹರಿಹರ ಕ್ಷೇತ್ರ ಮಾತ್ರ ಕಮಲ ಅರಳಿದೆ.

ಹರಿಹರದಲ್ಲಿ ಬಿಜೆಪಿಯ ಬಿ.ಪಿ. ಹರೀಶ್ ಗೆಲುವು ಸಾಧಿಸಿರುವುದು ಹೊರತು ಪಡಿಸಿದರೆ ದಾವಣಗೆರೆ ದಕ್ಷಿಣದಲ್ಲಿ ಶಾಮನೂರು ಶಿವಶಂಕರಪ್ಪ, ಉತ್ತರ ಎಸ್.ಎಸ್. ಮಲ್ಲಿಕಾರ್ಜುನ್, ಜಗಳೂರು ಬಿ. ದೇವೇಂದ್ರಪ್ಪ, ಮಾಯಕೊಂಡ ಕೆ.ಎಸ್. ಬಸವಂತಪ್ಪ, ಚನ್ನಗಿರಿ ಶಿವಗಂಗಾ ಬಸವರಾಜ್, ಹೊನ್ನಾಳಿ ಡಿ.ಜಿ. ಶಾಂತನಗೌಡ ಸೇರಿದಂತೆ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯದ ನಗೆ ಬೀರಿದ್ದಾರೆ.

ಕಳೆದ ೨೦೧೮ರಲ್ಲಿ ೫ ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಿತ್ತು. ಈ ಚುನಾವಣೆಯಲ್ಲಿ ಏಳಕ್ಕೆ ಏಳರಲ್ಲೂ ಬಿಜೆಪಿ ಗೆಲ್ಲಿಸಬೇಕೆಂದು ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಷಾ ಸೇರಿದಂತೆ ಅನೇಕ ಕೇಂದ್ರ ನಾಯಕರು, ಬಿಜೆಪಿ ವರಿಷ್ಠರನ್ನು ಕರೆಸಿ ಸಮಾವೇಶಗಳನ್ನು ಮಾಡಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಮೋದಿ ಮೋಡಿ ನಡೆಯದೇ ಕಾಂಗ್ರೆಸ್ ಕಲಿಗಳು ಗೆಲುವು ಸಾಧಿಸಿದ್ದಾರೆ.

Exit mobile version