Home ನಮ್ಮ ಜಿಲ್ಲೆ ಕಲಬುರಗಿ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಫಲಿತಾಂಶ ವೃದ್ಧಿಗೆ ಪಣ

ಕಲ್ಯಾಣ ಕರ್ನಾಟಕ ಶೈಕ್ಷಣಿಕ ಫಲಿತಾಂಶ ವೃದ್ಧಿಗೆ ಪಣ

0

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಗುಣಾತ್ಮಕ ಶಿಕ್ಷಣ ವೃದ್ಧಿಗೆ ಸಂಕಲ್ಪ ಮಾಡಲಾಗಿದೆ ಎಂದು ವೇದಿಕ್ ಇನ್ಸಿಟ್ಯೂಟ್ ಆಫ್ ಎಕ್ಸ್ಲೆನ್ಸ್ ಸಂಸ್ಥೆಯ ಗೌರವ ಅಧ್ಯಕ್ಷರೂ ಆದ ನಾಡಿನ ಖ್ಯಾತ ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಹೇಳಿದರು.
ನಾಗನಹಳ್ಳಿ ಸಮೀಪದ ಜಿಡಿಎ ಲೇಔಟ್‌ನಲ್ಲಿರುವ ವೇದಿಕ್ ಇನ್ಸಿಟ್ಯೂಟ್ ಆಫ್ ಎಕ್ಸ್ಲೆನ್ಸ್ ಸಂಸ್ಥೆಯಲ್ಲಿ ಭಾನುವಾರ ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ತರಬೇತಿ ಕಾರ್ಯಾಗಾರ-ಸಂವಾದ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಗಮನದಲ್ಲಿಟ್ಟುಕೊಂಡು ಶಿಕ್ಷಕರು ಬೋಧನೆಗೆ ಕೇಂದ್ರೀಕರಿಸಬೇಕು. ಆದರೆ ವಿದ್ಯಾರ್ಥಿಗಳು ಅಂಕ ಸಂಪಾದಿಸುವುದೇ ಜೀವನದ ಗುರಿ ಅಲ್ಲ, ಸ್ಪಷ್ಟ ಗುರಿಯೊಂದಿಗೆ ಜೀವನದಲ್ಲಿ ಉನ್ನತಿ, ಯಶಸ್ಸು ಸಾಧಿಸಬೇಕಾದರೆ ಸಾಮಾಜಿಕ ಕಳಕಳಿ, ಮಾನವೀಯ ಮೌಲ್ಯಗಳು, ನೈತಿಕ ಶಿಕ್ಷಣದ ಅತ್ಯವಶ್ಯಕ ಎಂದು ಪ್ರತಿಪಾದಿಸಿದರು.
ಕಲಬುರಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಆಯುಕ್ತಾಲಯದ ಆಯುಕ್ತ ಡಾ. ಆಕಾಶ ಎಸ್ ಮಾತನಾಡಿ, ನಾಗರಿಕ ಸಮಾಜದ ಸ್ವಾಸ್ಥ್ಯ ಕಾಪಾಡುವಂತ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳು ದೂರದೃಷ್ಟಿ, ಸ್ಪಷ್ಟ ಗುರಿ ಇಟ್ಟುಕೊಂಡು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಮುಂದಿನ ಹತ್ತು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಫಲಿತಾಂಶ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ವೇದಿಕ್ ಸಂಸ್ಥೆ ಅಧ್ಯಕ್ಷೆ ಮಮತಾ ಸಂತೋಷ ಪಾಟೀಲ್, ನಿರ್ದೇಶಕಿ ಮಂಜುಳಾ ರೆಡ್ಡಿ ಪಾಟೀಲ್ ಮತ್ತಿತರರಿದ್ದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಝಡ್.ಎನ್. ಜಾಗೀರದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಅಶ್ವಿನಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಅಶ್ವಿನಿ ಶೇರಿಕಾರ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಮಲ್ಲಿಕಾರ್ಜುನ ರಡ್ಡಿ ಪಾಟೀಲ್, ಸಂತೋಷ ಪಾಟೀಲ್, ಎನ್.ಎಂ. ಪಾಟೀಲ್ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯಪುರ ಜಿಲ್ಲೆ ಸೇರಿ ಕಲ್ಯಾಣ ಕರ್ನಾಟಕ ಭಾಗ ಕೇಂದ್ರೀಕರಿಸಿ ವೇದಿಕ್ ಸಂಸ್ಥೆಯ ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.ವಿದ್ಯಾರ್ಥಿಗಳಿಗೆ ಕಲಿಸುವ ರೀತಿ-ನೀತಿ, ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಅಧ್ಯಾತ್ಮ ವಿಷಯಗಳ ತತ್ವ ಇಟ್ಟುಕೊಡು ಬೋಧನೆಗೆ ಕ್ರಮವಹಿಸಲಾಗಿದೆ. ಸದ್ಯ ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಫೌಂಡೇಷನ್, ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್, ಐಐಟಿ, ಜೆಇಇ ಪರೀಕ್ಷೆ ಸಜ್ಜುಗೊಳಿಸಲು ತರಬೇತಿ ಕಾರ್ಯಕ್ರಮ ನೀಡಲಾಗುತ್ತಿದೆ.

ಡಾ. ಗುರುರಾಜ್ ಕರಜಗಿ, ಖ್ಯಾತ ಶಿಕ್ಷಣ ತಜ್ಞ

Exit mobile version