ಕಲಬುರಗಿ: ಇನ್ನೋವಾ ಕಾರೊಂದು ಉರುಳಿ ಬಿದ್ದ ಪರಿಣಾಮ ಐಎಎಸ್ ಅಧಿಕಾರಿ ಸೇರಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಜಿಲ್ಲೆಯ ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಮಂಗಳವಾರ ಸಂಜೆ ನಡೆದಿದೆ.
ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ (51) ಹಾಗೂ ಇವರ ಸಹೋದರ ಸಂಬಂಧಿಕರಾದ ಶಂಕರ ಬೀಳಗಿ (55) ಹಾಗೂ ಈರಣ್ಣ ಬೀಳಗಿ (53) ಮೃತಪಟ್ಟಿದ್ದಾರೆ.
ಈರಣ್ಣ ಸಿರಸಂಗಿ ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಮಹಾಂತೇಶ ಬೀಳಗಿ ಅವರು ತಮ್ಮ ಸಂಬಂಧಿಕರ ಮದುವೆಗೆಂದು ವಿಜಯಪುರದಿಂದ ಕಲಬುರಗಿಗೆ ಕಾರಿನಲ್ಲಿ ಐದು ಜನ ಆಗಮಿಸುತ್ತಿದ್ದರು.
ಜೇವರ್ಗಿಯ ಗೌನಳ್ಳಿ ಕ್ರಾಸ್ ಬಳಿ ಕಾರಿನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಸ್ಥಳದಲ್ಲಿಯೇ ಶಂಕರ ಬೀಳಗಿ ಮತ್ತು ಈರಣ್ಣ ಬೀಳಗಿ ಮೃತಪಟ್ಟಿದ್ದರು. ಗಾಯಗೊಂಡಿರುವ ಮಹಾಂತೇಶ ಬೀಳಗಿ ಮತ್ತು ಈರಣ್ಣ ಸಿರಸಂಗಿ ಮತ್ತು ಚಾಲಕನನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಬೆಸ್ಕಾಂ ಎಂಡಿ ಮಹಾಂತೇಶ ಬೀಳಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ. ಶರಣಪ್ಪ ಢಗೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಹಾಗೂ ಇತರರು ಆಸ್ಪತ್ರೆಗೆ ಆಗಮಿಸಿ ಸಂತಾಪ ವ್ಯಕ್ತಪಡಿಸಿದರಲ್ಲದೇ ಇತರರು ಸಹ ಆಸ್ಪತ್ರೆಗೆ ಆಗಮಿಸಿ ಕಂಬನಿ ಮಿಡಿಯುತ್ತಿರುವುದು ಕಂಡು ಬಂತು. ಕಷ್ಟದಿಂದ ಓದಿ ಕೆಎಎಸ್ ಪಾಸಾಗಿ ತದನಂತರ ಐಎಎಸ್ ಬಡ್ತಿ ಹೊಂದಿ ದಾವಣೆಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.
