Home ತಾಜಾ ಸುದ್ದಿ ಎಸ್ಸಿ,ಎಸ್ಟಿ,ಒಬಿಸಿಗೆ ಯಾಮಾರಿಸಿದ್ದೇ ಕಾಂಗ್ರೆಸ್ ಸಾಧನೆ: ಮುಖ್ಯಮಂತ್ರಿ

ಎಸ್ಸಿ,ಎಸ್ಟಿ,ಒಬಿಸಿಗೆ ಯಾಮಾರಿಸಿದ್ದೇ ಕಾಂಗ್ರೆಸ್ ಸಾಧನೆ: ಮುಖ್ಯಮಂತ್ರಿ

0

ಹುಬ್ಬಳ್ಳಿ : ಎಸ್ಸಿಎಸ್ಟಿ,ಒಬಿಸಿಗೆ ಕಾಂಗ್ರೆಸ್ ಪಕ್ಷ ಬರೀ ಯಾಮಾರಿಸಿಕೊಂಡೇ ಬಂದಿತ್ತು. ಈಗ ನಮ್ಮ ಸರ್ಕಾರ ಸರ್ವ ಸಮುದಾಯದ ಹಿತರಕ್ಷಣೆಗೆ ಬದ್ಧವಾಗಿ ಮೀಸಲಾತಿ ನಿಗದಿಪಡಿಸಿ ಘೋಷಣೆ ಮಾಡಿದೆ. ಇದರಲ್ಲಿ ಯಾವುದೇ ರಾಜಕೀಯ ಗಿಮಿಕ್ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಇಷ್ಟು ವರ್ಷ ಅಧಿಕಾರದಲ್ಲೇ ಇದ್ದರು. ಅವರಿಂದ ಏನೂ ಮಾಡಲು ಆಗಲಿಲ್ಲ. ಅವರಿಂದ ಆಗದೇ ಇದ್ದುದ್ದನ್ನು ನಮ್ಮ ಸರ್ಕಾರ ಮಾಡಿದೆ ಎಂದರು.

ಮೀಸಲಾತಿ ನಿಗದಿಪಡಿಸುವುದು ಜೇನುಗೂಡಿಗೆ ಕೈ ಹಾಕಿದಂತೆ. ಅದನ್ನು ಜಾರಿ ಮಾಡುವುದು ಅಸಾಧ್ಯ ಎಂದು ಕಾಂಗ್ರೆಸ್ ನವರು ಭಾವಿಸಿದ್ದರು. ಆದರೆ, ಈ ಬಗ್ಗೆ ನಿರ್ಣಯ ಕೈಗೊಳ್ಳುವ ಸರ್ಕಾರ ಇದೆ ಎಂಬುದು ಅವರಿಗೆ ಗೊತ್ತಿರಲಿಲ್ಲ ಎಂದರು.
ಜೇನು ಗೂಡಿಗೆ ಕೈ ಹಾಕದೇ ಜೇನು ತುಪ್ಪ ಸಿಗುವುದಿಲ್ಲ. ಜೇನು ಹುಳು ಕೈಗೆ ಕಚ್ಚಿದರೂ ಚಿಂತೆ ಇಲ್ಲ. ನಮ್ಮ ಶೋಷಿತ, ದಲಿತರು, ಬಡವರು, ಅನ್ಯಾಯಕ್ಕೊಳಗಾದ ಸಮುದಾಯಕ್ಕೆ ನ್ಯಾಯ ದೊರಕಿಸಲು ಸಾಕಷ್ಟು ಚಿಂತನೆ ಮಾಡಿ, ಚರ್ಚಿಸಿ ಮೀಸಲಾತಿ ನಿಗದಿಪಡಿಸಿ ಘೋಷಣೆ ಮಾಡಿದ್ದೇನೆ. ಈ ಕುರಿತು ವಿಸ್ತೃತ ಪಟ್ಡಿಯನ್ನು ಶೀಘ್ರ ಬಿಡುಗಡೆ ಮಾಡಲಿದ್ದೇನೆ ಎಂದರು.

ಮಹದಾಯಿ ಕಾಮಗಾರಿ ಜಾರಿಗೆ ನೀತಿ ಸಂಹಿತೆ ಅಡ್ಡಿ ಇಲ್ಲ:
ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಪರಿಸರ ಮಂಡಳಿ ಒಪ್ಪಿಗೆ ಸಿಕ್ಕ ತಕ್ಷಣ ಜಾರಿ ಮಾಡುತ್ತೇವೆ. ಅದಷ್ಟು ಬೇಗ ಟೆಂಡರ್ ಕರೆಯುತ್ತೇವೆ. ಚುನಾವಣೆ ಮುಗಿದ ಬಳಿಕ ಕಾಮಗಾರಿ ಆರಂಭವಾಗುತ್ತದೆ ಎಂದು ಹೇಳಿದರು.
ಇಂದಿನ ಕೋರ್ ಕಮಿಟಿ ಸಭೆಯಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖವಾಗಿ ಚರ್ಚೆ ಮಾಡಲಾಗುವುದು ಎಂದರು.
ನಮ್ಮ ಪಕ್ಷ ಯಾವಾಗಲು ಚುನಾವಣೆ ಘೋಷಣೆ ಆದ ಬಳಿಕವೇ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡುತ್ತದೆ. ಈ ಬಾರಿಯೂ ಅದೇ ರೀತಿ ಅಭ್ಯರ್ಥಿಗಳ ಪಟ್ಟಿ ಘೋಷಣೆ ಆಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

Exit mobile version