ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ‘ಬಿಲ್ಲ ರಂಗ ಬಾಷಾ’ (BRB) ಸ್ಪೆಷಲ್ ಅಪ್‌ಡೇಟ್ ನೀಡಿದೆ.
ಬೆಂಗಳೂರು: ಕನ್ನಡ ಚಲನ ಚಿತ್ರರಂಗದ ಅಗ್ರ ನಟ ಕಿಚ್ಚ ಸುದೀಪ್ ಹುಟ್ಟು ಹಬ್ಬದಂದು ಅಭಿಮಾನಿಗಳಿಗೆ ದೊಡ್ಡ ಉಡುಗೊರೆ ಸಿಕ್ಕಿದೆ. ಅನೂಪ್ ಭಂಡಾರಿ ನಿರ್ದೇಶನದ ಬಹು ನಿರೀಕ್ಷಿತ ‘ಬಿಲ್ಲ ರಂಗ ಬಾಷಾ’ ಚಿತ್ರದ ಮೊದಲನೇ ಪೋಸ್ಟರ್ ಹಾಗೂ ವಿಶೇಷ ಅಪ್‌ಡೇಟ್ ಬಿಡುಗಡೆಯಾಗಿದೆ.
ಚಿತ್ರದ ಬಗ್ಗೆ ಈಗಾಗಲೇ ಅಪಾರ ಕುತೂಹಲವಿದ್ದು, ನಿರ್ದೇಶಕ ಅನೂಪ್ ಭಂಡಾರಿ ಕಥೆಯ ರೂಪರೇಷೆ ಕುರಿತು ಹಿಂದೆಯೇ ಕುತೂಹಲ ಕೆರಳಿಸುವ ಹೇಳಿಕೆ ನೀಡಿದ್ದರು. ಅವರು “Once Upon A Time in 2209 AD” ಎಂದು ಸೂಚನೆ ನೀಡಿದ್ದು, ಇದು ಭವಿಷ್ಯದ ಕಾಲಘಟ್ಟದ ಕಥೆ ಎಂಬ ನಿರೀಕ್ಷೆ ಮೂಡಿಸಿದೆ.
‘ಬಿಲ್ಲ ರಂಗ ಬಾಷಾ’ ಸಂಪೂರ್ಣ ಕಾಲ್ಪನಿಕ ಕಥೆಯಾಗಿದ್ದು, ಹೊಸ ಪ್ರಪಂಚದಲ್ಲಿ ಸಾಗುವ ವಿಭಿನ್ನ ಪ್ರಯೋಗದ ಸಿನಿಮಾ. ಚಿತ್ರಕ್ಕಾಗಿ ಭವ್ಯವಾದ ಸೆಟ್‌ಗಳನ್ನು ನಿರ್ಮಿಸಲಾಗುತ್ತಿದ್ದು, ಉನ್ನತ ಮಟ್ಟದ VFX ಬಳಕೆಯಾಗಲಿದೆ. ಕಥೆಯ ಸ್ವರೂಪ ಹಾಗೂ ದೃಶ್ಯ ವೈಶಿಷ್ಟ್ಯತೆಗಳನ್ನು ಗಮನಿಸಿದರೆ ಇದು ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗವಾಗಿ ಹೊರಹೊಮ್ಮಲಿದೆ ಎಂಬ ನಿರೀಕ್ಷೆಯಿದೆ.
ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗಕ್ಕೆ ‘ಬಿಲ್ಲ ರಂಗ ಬಾಷಾ: ಫಸ್ಟ್ ಬ್ಲಡ್’ ಎಂಬ ಶೀರ್ಷಿಕೆ ಇಡಲಾಗಿದೆ. ಸುದೀಪ್ ಹುಟ್ಟು ಹಬ್ಬದಂದು ಬಿಡುಗಡೆಗೊಂಡಿರುವ ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ಕಿಚ್ಚನ ಗಂಭೀರ ಲುಕ್ ಅಭಿಮಾನಿಗಳನ್ನು ಇನ್ನಷ್ಟು ಕುತೂಹಲಕ್ಕೆ ಒಳಪಡಿಸಿದೆ.
ಅಭಿಮಾನಿಗಳು ಹಾಗೂ ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಫಸ್ಟ್ ಲುಕ್ ಪೋಸ್ಟರ್‌ನ್ನು ಹಂಚಿಕೊಂಡು ಹುಟ್ಟುಹಬ್ಬದ ಶುಭಾಶಯಗಳ ಜೊತೆಗೆ ಸಿನಿಮಾ ಕುರಿತು ತಮ್ಮ ನಿರೀಕ್ಷೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ‘ರಂಗಿತರಂಗ’, ‘ರಾಜರಥ’, ‘ವಿಕ್ರಾಂತ್ ರೋಣ’ ಮುಂತಾದ ವಿಭಿನ್ನ ಚಿತ್ರಗಳನ್ನು ನೀಡಿರುವ ನಿರ್ದೇಶಕ ಅನೂಪ್ ಭಂಡಾರಿ ಅವರೊಂದಿಗೆ ಸುದೀಪ್ ಅಭಿನಯಿಸುವ ಈ ಸಿನಿಮಾ, ಕಥಾ ತಂತ್ರ ಹಾಗೂ ತಾಂತ್ರಿಕ ಗುಣಮಟ್ಟದ ದೃಷ್ಟಿಯಿಂದ ಕನ್ನಡ ಸಿನಿರಂಗಕ್ಕೆ ಹೊಸ ಎತ್ತರ ನೀಡಲಿದೆ ಎಂದು ಅಂದಾಜಿಸಲಾಗಿದೆ.
