ಯಾದಗಿರಿ: ಸುರಪುರ ತಾಲೂಕಿನ ಕೆಂಭಾವಿಯಲ್ಲಿ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಜಿಲ್ಲಾಡಳಿತದಿಂದ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಕೆಲವು ಸಾಮಾಜಿಕ ಸಂಘಟನೆಗಳಿಂದ ವಿರೋಧ ವ್ಯಕ್ತವಾದರೂ, ಆಡಳಿತವು ಶಾಂತಿ ಸಭೆಯ ವರದಿ ಪರಿಶೀಲಿಸಿ ಪಥಸಂಚಲನಕ್ಕೆ ಅನುಮೋದನೆ ನೀಡಿದೆ.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರು ನೀಡಿರುವ ಆದೇಶದ ಪ್ರಕಾರ, ಕೆಂಭಾವಿ ಪಟ್ಟಣದ ಪುರಸಭೆ ಕಚೇರಿ ಮುಂಭಾಗದಿಂದ ಪಥಸಂಚಲನ ಆರಂಭವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಪಥಸಂಚಲನದ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಕಠಿಣ ಭದ್ರತೆ ಒದಗಿಸಲಿದೆ.
ಆದೇಶದ ಪ್ರಕಾರ, ಪಥಸಂಚಲನದ ವೇಳೆ ಸಾರ್ವಜನಿಕ ಆಸ್ತಿ ಹಾನಿಯಾದರೆ ಸಂಘಟನೆ ಮುಖಂಡರೇ ಹೊಣೆಗಾರರು. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾದರೆ ಸಂಘಟನೆಯೇ ಜವಾಬ್ದಾರಿ. ಯಾವುದೇ ಜಾತಿ ಅಥವಾ ಧರ್ಮಕ್ಕೆ ನೋವುಂಟುಮಾಡುವ ಘೋಷಣೆ ಕೂಗುವಂತಿಲ್ಲ. ಮಾರಕಾಸ್ತ್ರ ಹಿಡಿದುಕೊಂಡು ಪಥಸಂಚಲನ ನಡೆಸುವಂತಿಲ್ಲ. ಪಥಸಂಚಲನ ನಡೆಯುವ ವೇಳೆ ಯಾವುದೇ ಮಾರಕಾಸ್ತ್ರ ಹಿಡಿದು ಹೋಗುವಂತಿಲ್ಲ ಎಂದು ಆದೇಶದಲ್ಲಿ ಉಲ್ಲೇಖಲಾಗಿಸಲಾಗಿದೆ.
ಜಿಲ್ಲಾಡಳಿತವು ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ಎರಡೂ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದು, ಪಥಸಂಚಲನ ಶಾಂತಿಯುತವಾಗಿ ನಡೆಯಲು ಅಗತ್ಯ ಕ್ರಮ ಕೈಗೊಂಡಿದೆ.
