ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಮಧ್ಯಾಹ್ನ ಸಂಭವಿಸಿದ ಹೃದಯವಿದ್ರಾವಕ ಘಟನೆ ಒಂದರಲ್ಲಿ ಕೇವಲ 2 ವರ್ಷದ ಬಾಲಕಿ ಲಕ್ಷ್ಮಿ ಕೆಎಸ್‌ಆರ್‌ಟಿಸಿ ಬಸ್‌ಗೆ ಹರಿದು ದುರ್ಮರಣಕ್ಕೀಡಾಗಿದ್ದಾಳೆ.
ಮೃತ ಬಾಲಕಿ ಪರಸಪ್ಪ ತಂದೆ ದ್ಯಾವಪ್ಪ ಹುಣಸ್ಯಾಳ ರವರ ಪುತ್ರಿ ಆಗಿದ್ದಾಳೆ. ಸ್ಥಳೀಯರ ಪ್ರಕಾರ, KA 33 F 0346 ನಂಬರಿನ ಕೆಎಸ್‌ಆರ್‌ಟಿಸಿ ಬಸ್ ಕೂಡಲಗಿ ಗ್ರಾಮದಿಂದ ಸುರಪುರ ಕಡೆಗೆ ತೆರಳುತ್ತಿದ್ದಾಗ, ಮಗು ಅಂಗಳದ ಬಳಿ ಆಟವಾಡುತ್ತಾ ರಸ್ತೆಬದಿ ಬಂದ ಕ್ಷಣದಲ್ಲಿ ಅವಘಡ ಸಂಭವಿಸಿದೆ.
ಬಸ್‌ನ ಎರಡು ಚಕ್ರಗಳು ಮಗುವಿನ ಮೇಲೆ ಹರಿದ ಪರಿಣಾಮ ದೇಹ ಛಿದ್ರ ಛಿದ್ರಗೊಂಡಿದೆ. ಘಟನೆ ನಂತರ ಕುಟುಂಬಸ್ಥರ ಆಕ್ರಂದನ ಸುತ್ತಮುತ್ತಲಿನವರ ಮನ ಕಲಕುವಂತಿತ್ತು. ಗ್ರಾಮದ ವಾತಾವರಣ ಶೋಕಸಂತ್ರಸ್ತಗೊಂಡಿತ್ತು.
ಘಟನೆ ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಸ್ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡುವ ಪ್ರಕ್ರಿಯೆ ಮುಂದುವರೆದಿದೆ.
ಗ್ರಾಮಸ್ಥರು ರಸ್ತೆ ಸುರಕ್ಷತಾ ಕ್ರಮಗಳ ಕೊರತೆ ಹಾಗೂ ಬಸ್ ಚಾಲಕರ ಅಜಾಗರೂಕತೆಯ ಬಗ್ಗೆ ಕಿಡಿಕಾರಿದ್ದಾರೆ.
