Home ನಮ್ಮ ಜಿಲ್ಲೆ ವಿಜಯಪುರ ವಿಜಯಪುರ: ಟ್ರಸ್ಟ್‌ಗೂ – ಪಂಚಮಸಾಲಿ ಪೀಠಕ್ಕೂ ಸಂಬಂಧವಿಲ್ಲ

ವಿಜಯಪುರ: ಟ್ರಸ್ಟ್‌ಗೂ – ಪಂಚಮಸಾಲಿ ಪೀಠಕ್ಕೂ ಸಂಬಂಧವಿಲ್ಲ

0

ವಿಜಯಪುರ: ಟ್ರಸ್ಟ್‌ಗೂ ಹಾಗೂ ಪೀಠಕ್ಕೂ ಸಂಬಂಧವೇ ಇಲ್ಲ. ಪಂಚಮಸಾಲಿ ಪೀಠ ಸ್ಥಾಪನೆ ಮಾಡಿದ್ದು ಭಕ್ತರು, ಹೀಗಾಗಿ ಉಚ್ಚಾಟನೆ ಮಾಡುವ ಅಧಿಕಾರ ಟ್ರಸ್ಟ್‌ಗೆ ಇಲ್ಲ. ಈ ರೀತಿ ನೂರಾರು ಟ್ರಸ್ಟ್‌ಗಳಿವೆ, ಆದರೆ ಪಂಚಮಸಾಲಿ ಪೀಠಕ್ಕೂ ಹಾಗೂ ಟ್ರಸ್ಟ್‌ಗೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಪಾದಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಸ್ತ ಭಕ್ತರು, ಲಿಂಗಾಯತ ಮಠಾಧೀಶರ ಒಕ್ಕೂಟ, ಸಹೃದಯಿ ಸಂತರ ಒಕ್ಕೂಟ ಸೇರಿದಂತೆ ಸಕಲ ಪೂಜ್ಯರ ಸಮಕ್ಷಮದಲ್ಲಿ ಪೀಠ ರಚನೆ ಮಾಡಲಾಗಿದೆ, ಪೀಠ ಸ್ವತಂತ್ರವಾಗಿದೆ. ಈ ಮೊದಲು ಟ್ರಸ್ಟ್ ಪದಾಧಿಕಾರಿಗಳು ಮಠಕ್ಕೆ ಜಾಗ ನೀಡುವುದಾಗಿ ವಾಗ್ದಾನ ಮಾಡಿದರು, ನಂತರ ನನ್ನನ್ನು ಟ್ರಸ್ಟ್ ಅಧ್ಯಕ್ಷರನ್ನಾಗಿ ಮಾಡುವುದಾಗಿ ಹೇಳಿದರೂ ಅದನ್ನು ಮಾಡಲಿಲ್ಲ. ಇದು ವೈಯಕ್ತಿಕವಾಗಿ ರಚನೆಯಾಗಿರುವ ಟ್ರಸ್ಟ್. ಪೀಠಕ್ಕೆ ಭೂಮಿ ಕೊಡುವುದಾಗಿ ಹೇಳಿ ಸ್ವಂತಕ್ಕೆ ಜಮೀನು ಮಾಡಿಕೊಂಡರು, ಹೀಗಾಗಿ ಸಮಾಜ ಶಾಶ್ವತ ಎಂದು ಸಮಾಜ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವೆ ಎಂದರು.

ಕೂಡಲಸಂಗಮವನ್ನು ಮೂಲಪೀಠವಾಗಿಸಿಕೊಂಡು ಭಕ್ತರ ಸಭೆ ನಡೆಸಿ ಶಾಖಾ ಮಠಗಳನ್ನು ಮಾಡಲಾಗುವುದು. ಒಂದು ಗುಡಿಸಲಿನಲ್ಲಿಯೂ ಸಮಾಜ ಸಂಘಟನೆ ಕಾರ್ಯ ನೆರವೇರಿಸಲು ಬದ್ಧ, ಭಕ್ತರ ನಿರ್ಧಾರವೇ ಅಂತಿಮ ಎಂದರು.

ಧರ್ಮ ಕಾಲಂನಲ್ಲಿ ಹಿಂದೂ ಬರೆಯಿಸಿ: ಲಿಂಗಾಯತ ಧರ್ಮಕ್ಕೆ ಇನ್ನೂ ಕೋಡ್ ದೊರಕಿಲ್ಲ, ಇನ್ನೊಂದೆಡೆ ಪಂಚಮಸಾಲಿ ಸಮಾಜದ ಮೀಸಲಾತಿಗೆ ಹಿನ್ನಡೆಯಾಗಬಾರದು ಎಂದು ಧರ್ಮ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಲಿಂಗಾಯತ ಪಂಚಮಸಾಲಿ ಎಂದು ಬರೆಯಿಸುವ ನಿರ್ಣಯ ಸ್ವೀಕರಿಸಲಾಗಿದೆ ಎಂದು ಶ್ರೀಗಳು ಸ್ಪಷ್ಟಪಡಿಸಿದರು.

ಹುಬ್ಬಳ್ಳಿ, ವಿಜಯಪುರ, ಚಿಕ್ಕೋಡಿಯಲ್ಲಿ ಸುದೀರ್ಘ ಚಿಂತನ-ಮಂಥನ ಸಭೆ ನಡೆಸಿ ಬಹುಮತ ಆಧರಿಸಿ ಈ ನಿರ್ಣಯ ಸ್ವೀಕರಿಸಲಾಗಿದೆ. ಕುಲಕಸಬು ಕಾಲಂನಲ್ಲಿ ಪಂಚಮಸಾಲಿ ಬಾಂಧವರು ಕಡ್ಡಾಯವಾಗಿ ಕೃಷಿ ಕಾರ್ಮಿಕರು ಎಂದೇ ಬರೆಯಿಸಬೇಕು ಎಂದು ವಿನಂತಿಸಿದರು.

`ಟೀಕೆ ಮಾಡುವವರನ್ನು ನಾವು ಟೀಕಿಸುವುದಿಲ್ಲ. ಅವರ ತಪ್ಪುಗಳನ್ನು ನಾನು ಕ್ಷಮಿಸುವೆ. ಸಮಸ್ಯೆಗಳನ್ನು ಎದುರಿಸುವ ಬಲವನ್ನು ಭಕ್ತರು ನನಗೆ ನೀಡಿದ್ದಾರೆ. ಸಮಾಜ ಬಾಂಧವರಿಗೆ ನೋವಾಗಿರುವುದರಿಂದ ನನಗೆ ನೋವಾಗಿದೆ’ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version