ಹುಬ್ಬಳ್ಳಿ: ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರು, ಪದ್ಮಭೂಷಣ ಪುರಸ್ಕೃತ, ಸರಸ್ವತಿ ಸಮ್ಮಾನ್ ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ತಮ್ಮ ಕೊನೆಯ ದಿನಗಳವರೆಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕ್ರೀಯಾಶೀಲ ಸಾಹಿತಿಯಾಗಿದ್ದ ಭೈರಪ್ಪನವರು ಬರೆದ ವಂಶವೃಕ್ಷ, ಗೃಹಭಂಗ, ಆವರಣ, ನಾಯಿ ನೆರಳು, ಸಾಕ್ಷಿ, ಅನ್ವೇಷಣೆ ಸೇರಿದಂತೆ ಸುಮಾರು 21 ಕೃತಿಗಳು ಹಾಗೂ ಹಲವಾರು ಕಾದಂಬರಿಗಳು ಇಂದಿಗೂ ಜನಪ್ರಿಯವಾಗಿದ್ದು, ಯುವ ಸಮುದಾಯದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವುದು ಅವರ ಅಪಾರ ಜ್ಞಾನ ಭಂಡಾರ ಹಾಗೂ ಬರವಣೆಗೆ ಶೈಲಿಯನ್ನು ಎತ್ತಿ ತೋರಿಸುತ್ತಿದೆ ಎಂದು ಹೊರಟ್ಟಿ ಬಣ್ಣಿಸಿದ್ದಾರೆ. ಭೈರಪ್ಪನವರ ನಿಧನದಿಂದ ಕನ್ನಡ ಸಾರಸತ್ವ ಲೋಕ ಅಪೂರ್ವ ಸಾಹಿತಿಯನ್ನು ಕಳದೆಕೊಂಡಂತಾದ್ದು, ಇಡೀ ಕನ್ನಡ ನಾಡಿಗೆ ಭರಿಸಲಾರದ ನಷ್ಟ ಉಂಟಾಗಿದೆ ಎಂದು ಬಸವರಾಜ ಹೊರಟ್ಟಿ ಕಂಬನಿ ಮಿಡಿದಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ: ಸರಸ್ವತಿ ಸಮ್ಮಾನ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನ ಸುದ್ದಿ ಕೇಳಿ ನಿಜಕ್ಕೂ ನನಗೆ ಆಘಾತವಾಗಿದೆ. ಕನ್ನಡ ಸಾಹಿತ್ಯ ಲೋಕ ಒಂದು ಅನರ್ಘ್ಯ ರತ್ನವನ್ನು ಕಳೆದುಕೊಂಡತಾಗಿದೆ. ತಮ್ಮ ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದ್ದ ಭೈರಪ್ಪನವರು, ಕನ್ನಡ ಮಾತ್ರವಲ್ಲದೆ ತಮ್ಮ ಅನುವಾದಿತ ಕೃತಿಗಳು ಮೂಲಕ ಭಾರತಾದ್ಯಂತ ಅನೇಕ ಭಾಷೆಗಳಲ್ಲಿ ಅಸಂಖ್ಯಾತ ಓದುಗ ಬಳಗವನ್ನು ಸಂಪಾದಿಸಿದ್ದರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯ ವಲಯದಲ್ಲಿ ಹೆಸರಾಗಿದ್ದರು. ಅವರ ವಂಶವೃಕ್ಷ, ಹಾಗೂ ತಬ್ಬಲಿ ನೀನಾದೆ ಮಗನೆ ಕಾದಂಬರಿಗಳು ಚಲನಚಿತ್ರವಾಗಿ ಚಿತ್ರ ರಸಿಕರನ್ನು ಆಕರ್ಷಿಸಿದ್ದವು. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ, ಅವರ ಕುಟುಂಬ ವರ್ಗಕ್ಕೆ ಹಾಗೂ ಅಸಂಖ್ಯಾತ ಓದುಗ ಅಭಿಮಾನಿಗಳಿಗೆ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
ಸಂಸದ ಬಸವರಾಜ ಬೊಮ್ಮಾಯಿ: ನಾಡಿನ ಸಾಹಿತ್ಯ ಲೋಕದ ಸಾಕ್ಷಿಪ್ರಜ್ಞೆಯಂತಿದ್ದ ಎಸ್.ಎಲ್. ಭೈರಪ್ಪ ಅವರು ಸಾಹಿತ್ಯವನ್ನೇ ಉಸಿರಾಗಿಸಿಕೊಂಡು ಬದುಕಿದವರು. ಪರ್ವದ ಮೂಲಕ ಮಹಾಭಾರತ, ಉತ್ತರಖಾಂಡದ ಮೂಲಕ ರಾಮಾಯಣವನ್ನು ಪುನರ್ ವಿಮರ್ಶಿಸಿ ಜನತೆಗೆ ತಲುಪಿಸುವ ಕೆಲಸ ಮಾಡಿದ್ದಾರೆ. ಅವರ ಕಾದಂಬರಿಗಳು ಹಿಂದಿ, ಇಂಗ್ಲಿಷ್, ಮರಾಠಿ, ಸಂಸ್ಕೃತ ಭಾಷೆಗಳಿಗೂ ಭಾಷಾಂತರಗೊಂಡು ಜನಪ್ರಿಯತೆ ಪಡೆದಿವೆ. ಅವರ ಸಾಹಿತ್ಯ ಸೇವೆಗೆ ಸರಸ್ವತಿ ಸಮ್ಮಾನ ಸೇರಿದಂತೆ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು ದೇವರ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಬಸವರಾಜ ಬೊಮ್ಮಾಯಿ ಪ್ರಾರ್ಥಿಸಿದ್ದಾರೆ.
ಸಂಸದ ಜಗದೀಶ ಶೆಟ್ಟರ: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್. ಎಲ್ ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಅಗಲುವಿಕೆಯಿಂದ ಸಾಹಿತ್ಯ ಲೋಕಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ: ಅನೇಕ ಕಾದಂಬರಿಗಳ ಮೂಲಕ ಅಪಾರ ಪ್ರಮಾಣದ ಓದುಗರನ್ನು ಸೃಷ್ಟಿಸಿದ್ದರು. ತಮ್ಮ ಸಾಹಿತ್ಯ ಕೃಷಿಯಿಂದ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತ ಬಂದವರು. ಅವರ ಅಗಲಿಕೆಯಿಂದ ಕರುನಾಡು ಮಾತ್ರವಲ್ಲದೇ ಭಾರತದ ಸಾರಸ್ವತ ಲೋಕಕ್ಕೆ ಬಹುದೊಡ್ಡ ನಷ್ಟವಾಗಿದೆ. ಅವರು ಭೌತಿಕವಾಗಿ ಅಗಲಿದರೂ ತಮ್ಮ ಸಾಹಿತ್ಯದ ಕೊಡುಗೆಗಳ ರೂಪದಲ್ಲಿ ಸದಾ ಜನಮನದಲ್ಲಿ ಉಳಿದಿದ್ದಾರೆ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಶಾಸಕ ಪ್ರಸಾದ ಅಬ್ಬಯ್ಯ: ಸೈದ್ಧಾಂತಿಕ ಭಿನ್ನತೆಯ ಹಾದಿಯ ನಡುವೆಯೂ ದೊಡ್ಡ ಓದುಗರನ್ನು ಹೊಂದಿದ್ದ ಎಸ್.ಎಲ್. ಭೈರಪ್ಪನವರ ಅಗಲಿಕೆಯಿಂದ ಸಾಹಿತ್ಯ ವಲಯದ ಕೊಂಡಿಯೊಂದು ಕಳಚಿದಂತೆ ಆಗಿದೆ. ಅವರ ವಿಚಾರಧಾರೆಗಳು ಹೆಚ್ಚೆಚ್ಚು ಪಸರಿಸಲಿ. ಜನಮಾನಸದಲ್ಲಿ ಅಚ್ಚಳಿದೆ ಉಳಿಯುವಂತಾಗಲಿ ಎಂದು ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ, ರಾಜ್ಯ ಸ್ಲಮ್ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಸಂತಾಪ ಸೂಚಿಸಿದ್ದಾರೆ.
ಶಾಸಕ ಮಹೇಶ ಟೆಂಗಿನಕಾಯಿ: ಕರ್ನಾಟಕ ಸಾಹಿತ್ಯ ಲೋಕಕ್ಕೆ ತಮ್ಮ ಅಪಾರ ಕೊಡುಗೆ ನೀಡಿದ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನದ ಸುದ್ದಿ ತಿಳಿದು ಅಘಾತವಾಗಿದೆ. ಭೈರಪ್ಪ ಅವರ ನಿಧನದಿಂದ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಂತಾಪ ತಿಳಿಸಿದ್ದಾರೆ.
ವಾಣಿಜ್ಯೋದ್ಯಮ ಸಂಸ್ಥೆ: ಡಾ. ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ದುಃಖ ವ್ಯಕ್ತಪಡಿಸಿದೆ. ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ ಡಾ.ಎಸ್.ಎಲ್ ಭೈರಪ್ಪ ಅವರ ನಿಧನದಿಂದ ರಾಜ್ಯ ಹಾಗೂ ರಾಷ್ಟ್ರವು ಬಡವಾಗಿದೆ. ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ವಿರೇಶ ಮೊಟಗಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಜಂಟಿ ಗೌರವ ಕಾರ್ಯದರ್ಶಿ ಮಹೇಂದ್ರ ಸಿಂಘಿ ಹಾಗೂ ಸಂಸ್ಥೆಯ ಸದಸ್ಯರು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.