ದುಬೈ: ಭಾರತ ತಂಡ ಬಾಂಗ್ಲಾದೇಶ ವಿರುದ್ಧ 41 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫೈನಲ್ ಪ್ರವೇಶಿಸಿದೆ.
ಬುಧವಾರ ನಡೆದಂತಹ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾದೇಶಕ್ಕೆ 169 ರನ್‌ಗಳ ಉತ್ತಮ ಗುರಿಯನ್ನು ನೀಡಿತ್ತು. ಆದರೆ ಬಾಂಗ್ಲಾದೇಶ 19.3 ಓವರ್‌ಗಳಲ್ಲಿ ಕೇವಲ 127 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾರ ಅಬ್ಬರದ 75 ರನ್‌ಗಳ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ನೀರಸ ಬ್ಯಾಟಿಂಗ್ ನಡೆಸಿದ ಪರಿಣಾಮ ಭಾರತ ಕೇವಲ 168 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 38 ರನ್‌ಗಳನ್ನು ನೀಡಿದ್ದರಿಂದ, ಭಾರತ 150ರ ಗಡಿ ದಾಟಲು ಸಾಧ್ಯವಾಯಿತು. ಇಲ್ಲವಾದಲ್ಲಿ, ಭಾರತ ಕನಿಷ್ಠ ಮೊತ್ತಕ್ಕೆ ಕುಸಿದು ಸಂಕಷ್ಟಕ್ಕೆ ಸಿಲುಕುವಂತಾಗುತ್ತಿತ್ತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬಾಂಗ್ಲಾದೇಶ ಚೇಸಿಂಗ್ ಮಾಡುವ ಮೂಲಕ ಗೆಲ್ಲುವ ತಂತ್ರವನ್ನು ಅನುಸರಿಸಿತು. ಅಷ್ಟೇ ಅಲ್ಲದೇ, ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ಶುಭಮನ್ ಗಿಲ್ ಮೊದಲ ಮೂರು ಓವರ್‌ಗಳಲ್ಲಿ ಹೆಚ್ಚೇನೂ ರನ್ ಗಳಿಸುವ ಗೋಜಿಗೆ ಹೋಗಲಿಲ್ಲ.
ಆದರೆ, ನಂತರ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಷೇಕ್ ಶರ್ಮಾ ನೋಡ ನೋಡುತ್ತಲೇ ತಂಡವನ್ನು 50ರ ಗಡಿ ದಾಟಿಸಿದರು. ಮೊದಲ ಪವರ್‌ಪ್ಲೇನಲ್ಲೇ ಭಾರತ ಮತ್ತೆ ವಿಕೆಟ್ ನಷ್ಟವಿಲ್ಲದೇ 72 ರನ್‌ಗಳನ್ನು ಗಳಿಸಿತು.
ಅಭಿಷೇಕ್ ಶರ್ಮಾ ಬಾಂಗ್ಲಾ ಬೌಲರ್‌ಗಳನ್ನು ಬೆಂಡೆತ್ತುವ ಮೂಲಕ ಸಿಂಹಸ್ವಪ್ನವಾದರು. ಈ ವೇಳೆ ಕೇವಲ 25 ಎಸೆತಗಳಲ್ಲೇ ಅರ್ಧಶತಕ ಪೂರೈಸಿ, ಈ ಏಷ್ಯಾಕಪ್‌ನಲ್ಲಿ ಅತ್ಯಧಿಕ ರನ್ ಸರದಾರ ಎನ್ನಿಸಿಕೊಂಡರು.
ಪಾಕ್ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ 74 ರನ್‌ಗಳಿಸಿದ್ದರು. ಇದಕ್ಕಿಂತ ಬುಧವಾರದಂದು ವೇಗವಾಗಿಯೇ ರನ್ ಬಾರಿಸಿದರು. ಶುಭಮನ್ ಗಿಲ್ ಬಾಂಗ್ಲಾದೇಶದ ವಿರುದ್ಧ ಮಾತ್ರ ನಿರಾಸೆ ಮೂಡಿಸಿದರು. 19 ಎಸೆತಗಳಲ್ಲಿ 29 ರನ್‌ಗಳಿಸಿದ ಗಿಲ್, ಮೊದಲ ಪವರ್‌ಪ್ಲೇ ಮುಗಿಯುತ್ತಿದ್ದಂತೆ ರಿಶಾದ್ ಹುಸೇನ್‌ಗೆ ವಿಕೆಟ್ ನೀಡಿದರು.
ಶಿವಂ, ಸೂರ್ಯ ಪತನ: 3ನೇ ಕ್ರಮಾಂಕದಲ್ಲಿ ಆಡಿದ ಶಿವಂ ದುಬೆ ಹಾಗೂ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಬಾಂಗ್ಲಾ ಬೌಲರ್ ಮುಸ್ತಾಫಿಜುರ್ ರೆಹಮಾನ್ ಹಾಗೂ ರಿಶಾದ್ ಹುಸೇನ್ ಬಹುಬೇಗನೇ ವಿಕೆಟ್ ಕಿತ್ತರು. ದುಬೆ 2 ರನ್ ಗಳಿಸಿದರೆ, ಸೂರ್ಯ ಕೇವಲ 5 ರನ್ ಬಾರಿಸಿದರು. ತಿಲಕ್ ವರ್ಮಾ ಕೂಡ 5ಕ್ಕಿಂತ ಮೇಲೆರಲಿಲ್ಲ. ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ ತಂಡಕ್ಕೆ ಅಗತ್ಯವಿರುವ ರನ್‌ಗಳನ್ನು ತಂದುಕೊಡುವ ಯತ್ನ ಮಾಡಿದರು.
ಟಿ20 ಸಿಕ್ಸರ್ಸ್: ಅಭಿಷೇಕ್ ದಾಖಲೆ: ಸದ್ಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 5 ಸಿಕ್ಸರ್‌ಗಳನ್ನು ಸಿಡಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಸಿಕ್ಸರ್‌ಗಳನ್ನು ಬಾರಿಸುವ ಆಟಗಾರರ ಪೈಕಿ ಮೊದಲ ಸ್ಥಾನ ಪಡೆದುಕೊಂಡರು. ಈವರೆಗೂ 21 ಇನ್ನಿಂಗ್ಸ್ 396 ಎಸೆತಗಳನ್ನು ಎದುರಿಸಿರುವ ಅಭಿಷೇಕ್ 58 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಪ್ರತಿ 6.83 ಎಸೆತಗಳಿಗೊಮ್ಮೆ ಅಭಿಷೇಕ್ ಸಿಕ್ಸರ್ ಬಾರಿಸುತ್ತಾರೆ ಎಂದು ಅಂಕಿಅಂಶ ತಿಳಿಸಿದೆ.