ಮಹಾರಾಷ್ಟ್ರದಿಂದ ಜಲ ಆಯೋಗ ನಿಯಮ ಉಲ್ಲಂಘನೆ

0
71

ವಾಸುದೇವ ಹೆರಕಲ್ಲ

ಮಹಾರಾಷ್ಟ್ರ ಸರ್ಕಾರ ಜಲ ಆಯೋಗದ ನಿಯಮಾವಳಿ ಉಲ್ಲಂಘಿಸಿ ಅಕ್ರಮವಾಗಿ ಕೃಷ್ಣಾ ಹಾಗೂ ಭೀಮಾ ಉಪನದಿಗಳ ಮೇಲೆ ಅಕ್ರಮ ಯೋಜನೆಗಳನ್ನು ರೂಪಿಸಿರುವುದನ್ನು ಕರ್ನಾಟಕ ನೀರಾವರಿ ಇಲಾಖೆಯ ತಜ್ಞರು ಅಧ್ಯಯನ ಮಾಡಿ 2007ರಲ್ಲಿಯೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರೂ ಅದಿನ್ನೂ ಧೂಳು ತಿನ್ನುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.

ಆಗ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಲ್ಲಿಕೆಯಾಗಿರುವ ಈ ವರದಿ ಈಗಿನವರೆಗೂ ನೀರಾವರಿ ಇಲಾಖೆಯ ಕಡತಗಳ ರಾಶಿಯಲ್ಲಿ ಧೂಳು ತಿನ್ನುತ್ತಾ ಬಿದ್ದಿದೆ. ಆನಂತರ ಬಂದ ಯಾವುದೇ ಸರ್ಕಾರಗಳು ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಲೇ ಇಲ್ಲ.

ಕೃಷ್ಣಾ ಹಾಗೂ ಭೀಮಾ ನದಿಗಳಿಂದ ಪ್ರವಾಹ ಹಾಗೂ ಅಭಾವ ಪರಿಸ್ಥಿತಿ ಉಂಟಾಗುವುದಕ್ಕೆ ಮಹಾರಾಷ್ಟ್ರದ ಈ ಅಕ್ರಮ ಯೋಜನೆಗಳೇ ಪ್ರಮುಖ ಕಾರಣ ಎಂಬುದನ್ನು ತಜ್ಞರ ಸಮಿತಿ ಅಂಕಿ-ಅಂಶಗಳು, ನಕ್ಷೆಗಳು, ಅಕ್ರಮ ಯೋಜನೆಗಳ ಹೆಸರುಗಳು, ಅಲ್ಲಿ ಸಂಗ್ರಹವಾಗುವ ನೀರಿನ ಪ್ರಮಾಣ ಹಾಗೂ ಬಚಾವತ್‌ ಆಯೋಗದಲ್ಲಿ ಮಹಾರಾಷ್ಟ್ರಕ್ಕೆ ಹಂಚಿಕೆ ಮಾಡಿರುವ ನೀರಿನ ಪ್ರಮಾಣವನ್ನು ತುಲನೆ ಮಾಡಿ ಸಮಗ್ರ ಅಧ್ಯಯನ ನಡೆಸಿದ್ದರು.

ಕೃಷ್ಣಾ ಭಾಗ್ಯ ಜಲ ನಿಗಮದ ಕಲಬುರ್ಗಿ ವಲಯದ ಮುಖ್ಯ ಇಂಜಿನಿಯರ್ ನೇತೃತ್ವದ ಸಮಿತಿ ನಡೆಸಿದ್ದ ಈ ವರದಿಯನ್ನು ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳಾಗಲಿ, ಆಗಿನ ಸಚಿವರಾಗಲಿ ಗಮನ ಕೊಟ್ಟು ನೋಡಲೇ ಇಲ್ಲ. ಬಹುಶಃ ಈ ವರದಿ ಕಸದ ಬುಟ್ಟಿಗೆ ಸೇರಿದ ಪರಿಣಾಮವಾಗಿ ಯಾವ ಮುಖ್ಯಮಂತ್ರಿಗಳ ಗಮನಕ್ಕೂ ಬರಲಿಲ್ಲ.

ಸಿನಾ ಸುರಂಗ ಮೂಲಕ ಭೀಮಾ ಜೋಡಣೆ ಯೋಜನೆ ಸಂಪೂರ್ಣ ಅಕ್ರಮ ಎಂಬುದನ್ನು ನೀರಾವರಿ ತಜ್ಞ ಇತಿಹಾಸಕಾರ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ತಮ್ಮ ‘ಸುಪ್ರೀಂಕೋರ್ಟ್‌ನಲ್ಲಿ ಭೋರ್ಗರೆದ ಭೀಮೆ’ ಎಂಬ ಪುಸ್ತಕದಲ್ಲಿ ನಮೂದಿಸಿದ್ದಾರೆ, ಅದು ಕೂಡಾ ಸರ್ಕಾರದ ಗಮನಕ್ಕೆ ಬರಲಿಲ್ಲ.

ವಿವಾದಾತೀತವಾದ ಆಲಮಟ್ಟಿ ಆಣೆಕಟ್ಟು ಎತ್ತರಿಸುವ ವಿಷಯದಲ್ಲಿ ಸುಖಾಸುಮ್ಮನೇ ಕ್ಯಾತೆ ತೆಗೆಯುವ ಮಹಾರಾಷ್ಟ್ರ, ಉಜಣಿ ಜಲಾಶಯದ ಎತ್ತರವನ್ನು 3 ಅಡಿ ಹೆಚ್ಚಿಸಿ ಉಜಣಿಯ ಡೆಡ್‌ ಸ್ಟೋರೇಜ್‌ನಿಂದ ಸಿನಾ ನದಿಗೆ ಸುರಂಗ ಮಾರ್ಗ ಮೂಲಕ ನೀರು ಹರಿಸಿದ್ದನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ ಕರ್ನಾಟಕ ಸರ್ಕಾರ ಆ ಕಡೆ ಗಮನವನ್ನೇ ನೀಡಲಿಲ್ಲ.

ಅಷ್ಟೇ ಅಲ್ಲ ಭೀಮಾ ನದಿಯಲ್ಲಿ ನೈಸರ್ಗಿಕ ಹರಿವು ಕಾಯ್ದುಕೊಳ್ಳುವುದಕ್ಕಾಗಿ ಸುಪ್ರೀಂಕೋರ್ಟ್‌ನಲ್ಲಿ ಎಸ್‌ಎಲ್‌ಪಿ ದಾಖಲಿಸಿ ಭೀಮಾ ತೀರದ ರೈತರಿಗೆ ನ್ಯಾಯ ಒದಗಿಸಿದ ನೀರಾವರಿ ಹೋರಾಟಗಾರ ಪಂಚಪ್ಪ ಕಲಬುರ್ಗಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದ ತಜ್ಞರು ಅವರಿಂದ ಹಲವಾರು ನಕ್ಷೆಗಳನ್ನು, ಮರಾಠಿ ಸಾಹಿತ್ಯದ ದಾಖಲೆಗಳನ್ನು ಮಹಾರಾಷ್ಟ್ರ ಸರ್ಕಾರದ ಕೆಲವು ಪ್ರಮುಖ ದಾಖಲೆಗಳನ್ನು ಪಡೆದಿದ್ದು ಯಾವುದೇ ಪ್ರಯೋಜನವಾಗಲಿಲ್ಲ.

ತಜ್ಞರ ವರದಿಗೆ ಧೂಳು: ತಜ್ಞರು ನೀಡಿದ ತನಿಖಾ ವರದಿ ಸಂಯುಕ್ತ ಕರ್ನಾಟಕಕ್ಕೆ ದೊರಕಿದ್ದು, ಅದರಲ್ಲಿರುವ ಅಂಶಗಳು ಭೀಮಾ, ಕೃಷ್ಣಾ ಕೊಳ್ಳದಲ್ಲಿ ಮಹಾರಾಷ್ಟ್ರದ ಒಂದೊಂದೇ ಅಕ್ರಮಗಳನ್ನು ಬಯಲಿಗೆಳೆಯುವಂತಿವೆ. ಸೆಪ್ಟೆಂಬರ್ 30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರೆ ಪೀಡಿತ ಪ್ರದೇಶಗಳಿಗೆ ವೈಮಾನಿಕ ಸಮೀಕ್ಷೆ ನಡೆಸಿ ಕಲಬುರ್ಗಿ ಹಾಗೂ ವಿಜಯಪುರದಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಾದರೂ ನೀರಾವರಿ ಇಲಾಖೆ ಅಧಿಕಾರಿಗಳು ಧೂಳು ಹಿಡಿದಿರುವ ತಜ್ಞರ ಸಮಿತಿ ವರದಿಯನ್ನು ಧೂಳು ಕೊಡವಿ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಾಗಿದೆ.

Previous articleಜಾವೆಲಿನ್ ಥ್ರೋ: ಭಾರತದ ರಿಂಕು ವಿಶ್ವ ದಾಖಲೆ
Next articleಟೀಂ ಇಂಡಿಯಾದ ಬಹುಮಾನಗಳ ಸುರಿಮಳೆ: 15 ತಿಂಗಳಲ್ಲಿ 3 ಐಸಿಸಿ ಟ್ರೋಫಿಗಳು!

LEAVE A REPLY

Please enter your comment!
Please enter your name here