Home ನಮ್ಮ ಜಿಲ್ಲೆ ವಿಜಯಪುರ ವಿಜಯಪುರ: ಭೀಮೆ ಪ್ರವಾಹ – ಸಂತ್ರಸ್ತರ ಸ್ಥಳಾಂತರ, ಹೆದ್ದಾರಿ ಬಂದ್

ವಿಜಯಪುರ: ಭೀಮೆ ಪ್ರವಾಹ – ಸಂತ್ರಸ್ತರ ಸ್ಥಳಾಂತರ, ಹೆದ್ದಾರಿ ಬಂದ್

0

ವಿಜಯಪುರ: ಮಹಾರಾಷ್ಟ್ರದಿಂದ ಬಿಟ್ಟ ನೀರು ಹಾಗೂ ಜಿಲ್ಲೆಯಲ್ಲಿ ಬೆಂಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು ಇಂಡಿ, ಆಲಮೇಲ, ಚಡಚಣ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ಆಲಮೇಲ ತಾಲೂಕಿನಲ್ಲಿ ಕೆಲ ಕುಟುಂಬಗಳನ್ನು ತೆಪ್ಪದ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ.

ಭೀಮಾ ನದಿಗೆ ದೊಡ್ಡ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು ಪಂಢರಪುರ ಮಾರ್ಗವಾಗಿ ಸೊಲ್ಲಾಪುರ ತಲುಪುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಭೀಮಾನದಿಯ ನೀರಿನ ಹರಿವಿನ ಪ್ರಮಾಣ ಗುರುವಾರ ರಾತ್ರಿ ಇಡೀ ಏರಿಕೆ ಕಂಡು ಶುಕ್ರವಾರ ಬೆಳಗಿನಿಂದ ಸಾಯಂಕಾಲದವರೆಗೆ ಅದೇ ಸ್ಥಿತಿಯಲ್ಲಿ ಮುಂದುವರೆದಿದೆ. ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜಿನಿಂದ ಶುಕ್ರವಾರ 3 ಲಕ್ಷ 55 ಸಾವಿರ ಕ್ಯೂಸೆಕ್ ನೀರನ್ನು 28 ಗೇಟ್‌ಗಳ ಮೂಲಕ ಹೊರಬಿಡಲಾಗುತ್ತಿದೆ. ಹಳೆ ತಾರಾಪುರದಲ್ಲಿ ವಾಸವಾಗಿರುವ ಎಲ್ಲಾ ಕುಟುಂಬಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಕರ್ನಾಟಕ – ಮಹಾರಾಷ್ಟ್ರ ಸಂಧಿಸುವ ದಕ್ಷಿಣ ಸೊಲ್ಲಾಪುರ ತಾಲೂಕಿನ ವಡಕಬಳ ಮಧ್ಯದ ಸಿನಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಬಳಿ ನೀರು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಇಂಡಿ ತಾಲೂಕಿನ ಹಿಂಗಣಿ ಬ್ಯಾರೇಜ್‌ನಿಂದ ಕೆಳ ಭಾಗದ ಗ್ರಾಮಗಳಲ್ಲಿ ಪ್ರವಾಹ ಎದುರಾಗಿದ್ದು, ಅತ್ತ ಇಂಡಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸಿದೆ. ಇಂಡಿ ತಾಲೂಕಿನ ಮಣ್ಣೂರಿನಲ್ಲಿರುವ ಪ್ರಸಿದ್ಧ ಯಲ್ಲಮ್ಮನ ದೇವಾಲಯ, ಶ್ರೀ ಗಜಲಿಂಗೇಶ್ವರ ದೇವಾಲಯ ಸಂಪೂರ್ಣ ಜಲಾವೃತವಾಗಿವೆ.

ಪ್ರವಾಹ ಪೀಡಿತ ಗ್ರಾಮಗಳಲ್ಲಿ ಸರ್ಕಾರ ಕಾಳಜಿ ಕೇಂದ್ರಗಳನ್ನು ತೆರೆದಿದೆ. ತಾರಾಪುರದಲ್ಲಿ 3 ಕುಟುಂಬಗಳು, ತಾವರ ಖೇಡದಲ್ಲಿ 3 ಕುಟುಂಬ, ದೇವಣಗಾಂವ 3 ಕುಟುಂಬ, ಕಡ್ಲೆವಾಡದಲ್ಲಿ 6 ಕುಟುಂಬ ಕುಮಸಿಗಿಯಲ್ಲಿ 40 ಕುಟುಂಬಗಳನ್ನು ರಕ್ಷಿಸಿ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಸಿಂದಗಿ ತಹಶೀಲ್ದಾರ್ ಕರೆಪ್ಪ ಬೆಳ್ಳಿ ತಿಳಿಸಿದ್ದಾರೆ.

ವ್ಯಾಪಕ ಮಳೆ: ಉತ್ತರ ಕರ್ನಾಟಕದ ಹಲವೆಡೆ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ ಶುಕ್ರವಾರ ಬೆಳಗ್ಗೆಯಿಂದ ನಿರಂತರ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ಬೆಳಗಾವಿ, ಹುಬ್ಬಳ್ಳಿ – ಧಾರವಾಡ ಸೇರಿದಂತೆ ಬಹುತೇಕ ಮಳೆ ಆರ್ಭಟ ಹೆಚ್ಚಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version