Home ನಮ್ಮ ಜಿಲ್ಲೆ ವಿಜಯಪುರ ಜಾತಿ ಸಮೀಕ್ಷೆ ಆ್ಯಪ್ ಖಾಸಗಿ ವ್ಯಕ್ತಿಗಳ ಕೈಯಲ್ಲಿ: ಸಚಿವ ಡಾ.ಎಂ.ಬಿ. ಪಾಟೀಲ ಕ್ರಮಕ್ಕೆ ಸೂಚನೆ

ಜಾತಿ ಸಮೀಕ್ಷೆ ಆ್ಯಪ್ ಖಾಸಗಿ ವ್ಯಕ್ತಿಗಳ ಕೈಯಲ್ಲಿ: ಸಚಿವ ಡಾ.ಎಂ.ಬಿ. ಪಾಟೀಲ ಕ್ರಮಕ್ಕೆ ಸೂಚನೆ

0

ವಿಜಯಪುರ: ಖಾಸಗಿ ವ್ಯಕ್ತಿಗಳ ಕೈಯಲ್ಲಿ ಸರ್ವೇ ಆ್ಯಪ್‌ನ ತನ್ನ ಲಾಗಿನ್ ಐ.ಡಿ. ಕೊಟ್ಟು ಸಮೀಕ್ಷೆಗೆ ಕಳುಹಿಸಿದ್ದ ರೇಷ್ಮೇ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಶಶಿಕಾಂತ ಜಿ.ಮಾಶ್ಯಾಳಗೆ ಜಿಲ್ಲಾಧಿಕಾರಿಗಳಿಂದ ಕಾರಣ ಕೇಳಿ ನೋಟಿಸು ಜಾರಿಯಾಗಿದೆ.

ಸಂಯುಕ್ತ ಕರ್ನಾಟಕ ದಿನಾಂಕ 3-2-2025 ರ ಸಂಚಿಕೆಯಲ್ಲಿ ಪ್ರಕಟವಾದ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಸರ್ವೇ ಆ್ಯಪ್ ಎಂಬ ವಿಶೇಷ ವರದಿಗೆ ತಕ್ಷಣ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲರು ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಿದ ಪರಿಣಾಮವಾಗಿ ಮಾಶ್ಯಾಳಗೆ ನೋಟಿಸ್ ಜಾರಿಯಾಗಿದೆ.

ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನಿರುದ್ಯೋಗಿ ಯುವಕರು ಕೆಲವೊಂದು ಮೈಗಳ್ಳ ಸರ್ಕಾರಿ ಸಿಬ್ಬಂದಿ ಬದಲಾಗಿ ಸರ್ವೇ ಕಾರ್ಯದಲ್ಲಿ ನಿರತರಾಗಿದ್ದರೂ ಇನ್ನೂ ಯಾರ ಮೇಲೆಯೂ ಕ್ರಮ ಕೈಗೊಳ್ಳಲಾಗಿಲ್ಲ.

ಸರ್ವೇ ಕಾರ್ಯದಲ್ಲಿ 20 ಸಿಬ್ಬಂದಿಯ ಮೇಲೆ ಒಬ್ಬ ಸೂಪರ್‌ವೈಸರ್ ಇರುತ್ತಾರೆ, ಆ ಸೂಪರ್‌ವೈಸರ್‌ಗೆ ಸರ್ವೇಗೆ ಬಂದವರು ಸರ್ಕಾರಿ ಸಿಬ್ಬಂದಿಯೇ ಅಥವಾ ಹೊರಗಿನವರೇ ಎಂಬ ಮಾಹಿತಿ ಇದ್ದೇ ಇರುತ್ತದೆ, ಅವರ ಮೂಗಿನ ಅಡಿಯಲ್ಲಿಯೇ ಈ ಅಕ್ರಮ ನಡೆಯುತ್ತಿದೆ. ಆದರೆ ಅಂತಹ ಸೂಪರ್‌ವೈಸರ್‌ಗಳ ವಿರುದ್ಧವೂ ಯಾವ ಕ್ರಮವಾಗಿಲ್ಲ.

ಮಾಹಿತಿ ನೀಡುವುದು ವಿವೇಚನೆಗೆ ಬಿಟ್ಟಿದ್ದು: ಜಾತಿ ಸಮೀಕ್ಷೆಗೆ ಖಾಸಗಿ ವ್ಯಕ್ತಿಗಳ ಕೈಯಲ್ಲಿ ಸರ್ವೇ ಆ್ಯಪ್‌ನ ಲಾಗಿನ್ ಐ.ಡಿ. ನೀಡುತ್ತಿರುವುದು ಅಪಾಯಕಾರಿ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರಿಂದ ದತ್ತಾಂಶ ಸೋರಿಕೆಯಾಗಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟ್ವೀಟ್ ಮಾಡಿದ್ದಾರೆ.

ಜಾತಿ ಗಣತಿಯಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವುದು ಸಂಪೂರ್ಣ ಐಚ್ಛಿಕವಾಗಿದೆ ಎಂದು ಯತ್ನಾಳ ಹೇಳಿದ್ದಾರೆ. ಸರ್ಕಾರದ ಕೆಲಸಗಳನ್ನು ಗಂಭೀರವಾಗಿ ಪರಿಗಣಿಸದೇ, ನಿಯಮಾವಳಿ ಪಾಲಿಸದೇ ಜವಾಬ್ದಾರಿಯನ್ನು ಹೊರಗುತ್ತಿಗೆ ನೌಕರರಿಗೆ ನೀಡುತ್ತಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version