Home ನಮ್ಮ ಜಿಲ್ಲೆ ಉತ್ತರ ಕನ್ನಡ ಶರಾವತಿ ಪಂಪ್ಡ್ ಸ್ಟೋರೆಜ್: ಸಾರ್ವಜನಿಕರಿಂದ ತೀವ್ರ ವಿರೋಧ

ಶರಾವತಿ ಪಂಪ್ಡ್ ಸ್ಟೋರೆಜ್: ಸಾರ್ವಜನಿಕರಿಂದ ತೀವ್ರ ವಿರೋಧ

0

ದಾಂಡೇಲಿ: ಶಿವಮೊಗ್ಗ ಜಿಲ್ಲೆಯ ತಳಕಳಲೆ,ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯ ಬಳಸಿ ಶರಾವತಿ ಪಂಪ್ಡ್ ಸ್ಟೋರೆಜ್ ಭೂಗತ ಜಲ ವಿದ್ಯುತ್ ಯೋಜನೆ ಅನುಷ್ಠಾನದ ಕುರಿತು ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆಯಿಂದ ಗೇರುಸೊಪ್ಪೆಯ ಗುತ್ತಿ ಕನ್ನಿಕಾ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ ಅಹವಾಲು ಸಭೆಯಲ್ಲಿ ಯೋಜನೆಗೆ ಭಾರೀ ವಿರೋಧ ವ್ಯಕ್ತಗೊಂಡಿದೆ.

ಈ ಅಹವಾಲು ಸಭೆಯಲ್ಲಿ 4043 ಅರ್ಜಿಗಳನ್ನು ಸಾರ್ವಜನಿಕರಿಂದ ಸ್ವೀಕೃತಗೊಂಡಿದೆ. ಎರಡು ಸಾವಿರಕ್ಕೂ ಹೆಚ್ಚುಜನ ಅಹವಾಲು ಸ್ವೀಕಾರ ಸಭೆಯಲ್ಲಿ ಪಾಲ್ಗೊಂಡು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅಹವಾಲು ಸಭೆಯಲ್ಲಿ ಹಲವು ಸಂಘಟನೆಗಳು, ಪರಿಸರ ಹೋರಾಟಗಾರರು, ಜನಪ್ರತಿನಿಧಿಗಳು, ಬಂಗಾರಮಕ್ಕಿಯ ಮಾರುತಿ ಗುರೂಜಿ ಅವರು ಯೋಜನೆಯಿಂದುಂಟಾಗುವ ಪರಿಸರ ಹಾನಿಗಳ ಕುರಿತು ಮಾತನಾಡಿ ಆಕ್ಷೇಪ ವ್ಯಕ್ತಪಡಿಸಿದರು.

ಯೋಜನೆಗೆ 2005ರಲ್ಲಿ 4 ಸಾವಿರ ಕೋಟಿ ವೆಚ್ಚದಲ್ಲಿ ಮಾಡಲು ನಿರ್ಧರಿಸಲಾಗಿದ್ದು, ಈಗ ಯೋಜನಾ ವೆಚ್ಚ 10 ಕೋಟಿ ದಾಟಿದೆ. ಯೋಜನೆ ಮುಗಿಯುವದರೊಳಗೆ ಮತ್ತಷ್ಟು ಕೋಟಿ ಹೆಚ್ಚಲಿದೆ. ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಇಲ್ಲಿನ ಭೌಗೋಳಿಕ ಪರಿಸರಕ್ಕೆ ಮಾರಕವಾದ’ ಯೋಜನೆಗಳ ಅವೈಜ್ಞಾನಿಕ ಅನುಷ್ಟಾನದಿಂದ ಕಾಡುಪ್ರಾಣಿಗಳು, ವಿನಾಶದ ಅಂಚಿನಲ್ಲಿರುವ ಸಿಂಗಳಿಕ ಮತ್ತಿತರ ಜೀವ ಸಂಕುಲಗಳಿಗೆ ಹಾನಿಯಾಗುವುದಲ್ಲದೇ, ಸುರಂಗ ಮಾರ್ಗಗಳಿಂದ ಭೂಮಿಯ ಮೇಲ್ಪದರಿಗೆ ಧಕ್ಕೆಯಾಗಿ ಭೂಕುಸಿತಗಳು ಸಂಭವಿಸಲಿದೆ.

ಜೊತೆಗೆ 14 ಸಾವಿರ ಮರಗಳನ್ನು ಕಡಿದು ಪರಿಸರದ ಅಸಮತೋಲನಕ್ಕೆ ಕಾರಣವಾಗಲಿದೆ. ಸ್ಥಳೀಯ ಜನರು ಮನೆ, ಜಮೀನುಗಳನ್ನು ಕಳೆದುಕೊಳ್ಳಲಿದ್ದಾರೆ. ಪಶ್ಚಿಮ ಘಟ್ಟ ಭಾಗ ನಾಶವಾಗುವ ಹಿನ್ನಲೆಯಲ್ಲಿ ಈ ಯೋಜನೆಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಅಹವಾಲುಗಳನ್ನು ಸ್ವೀಕರಿಸಿದರು.

ಅಹವಾಲು ಸಭೆಗೆ ಆಯೋಜಿಸಿದ ಸಭಾಂಗಣ ಚಿಕ್ಕದಾಗಿದ್ದು, ಬಂದ ಎರಡು ಸಾವಿರಕ್ಕೂ ಹೆಚ್ಚು ಜನರಿಂದ ಅಸ್ತವ್ಯಸ್ತತೆ, ಅಸಮಧಾನ ವ್ಯಕ್ತಗೊಂಡಿತು. ಶರಾವತಿ ಪಂಪ್ಡ್ ಯೋಜನೆಗೆ ಅಹವಾಲು ಸ್ವೀಕಾರ ಸಭೆಯಲ್ಲಿ ವಿರೋಧವೇ ಹೆಚ್ಚಾಗಿದ್ದು, ಯೋಜನೆಗೆ ಸಕಾರಾತ್ಮಕ ಪ್ರತಿಕ್ರಿಯೆ ಜನರಿಂದ ಬರಲಿಲ್ಲ.

NO COMMENTS

LEAVE A REPLY

Please enter your comment!
Please enter your name here

Exit mobile version