ದಾಂಡೇಲಿ / ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಶೀಘ್ರದಲ್ಲೇ ಅತ್ಯಾಧುನಿಕ ಕ್ಯಾನ್ಸರ್ ಕೇರ್ ಘಟಕ (Cancer Care Unit) ಸ್ಥಾಪನೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರದ ಪ್ರಕಾರ, ಘಟಕ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳ ಖರೀದಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ 18.25 ಕೋಟಿ ರೂಪಾಯಿ ಹಣವನ್ನು ಸರ್ಕಾರದ ವತಿಯಿಂದ ಭರಿಸಲಾಗುವುದು. ಜೊತೆಗೆ, 13.38 ಕೋಟಿ ರೂಪಾಯಿಗಳ ಅನುದಾನವನ್ನು ಸಂಸ್ಥೆಯ ಅಂತರಿಕ ಸಂಪನ್ಮೂಲದಿಂದ ಭರಿಸಲು ಅನುಮತಿ ನೀಡಲಾಗಿದೆ.
ಈ ಘಟಕ ಸ್ಥಾಪನೆಯಿಂದ ಉತ್ತರ ಕನ್ನಡ ಜಿಲ್ಲೆಯ ಹಾಗೂ ಸಮೀಪದ ಪ್ರದೇಶಗಳ ಕ್ಯಾನ್ಸರ್ ರೋಗಿಗಳಿಗೆ ಸ್ಥಳೀಯ ಮಟ್ಟದಲ್ಲೇ ಚಿಕಿತ್ಸೆ ದೊರಕುವಂತಾಗಲಿದೆ. ಇದುವರೆಗೆ ರೋಗಿಗಳು ಮಂಗಳೂರಿನ ಅಥವಾ ಹಬ್ಬಳ್ಳಿ-ಧಾರವಾಡದ ಆಸ್ಪತ್ರೆಗಳಿಗೆ ತೆರಳಬೇಕಾಗಿತ್ತು.
ಇದೇ ಸಭೆಯಲ್ಲಿ ರಾಜ್ಯ ಸರ್ಕಾರ ರಾಜ್ಯದ ನಾಲ್ಕು ಪ್ರಮುಖ ಬಂದರುಗಳಾದ ಕಾರವಾರ, ಹಳೆಯ ಮಂಗಳೂರು (ಬೇಂಗ್ರೆ ಬದಿ), ಹಳೆಯ ಮಂಗಳೂರು (ನಗರ ಬದಿ) ಮತ್ತು ಮಲ್ಲಿಯ ಬರ್ತ್‌ಗಳನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸಹ ತೀರ್ಮಾನ ಕೈಗೊಂಡಿದೆ. ಈ ಬಂದರುಗಳ ರಿಪೇರಿ–ಕಾರ್ಯಾಚರಣೆ–ನಿರ್ವಹಣೆ–ವರ್ಗಾವಣೆ (Repair–Operate–Maintain–Transfer) ಮಾದರಿಯಲ್ಲಿ ಅಭಿವೃದ್ಧಿ ಪಡಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ.
ಸಚಿವ ಸಂಪುಟದ ಈ ನಿರ್ಧಾರದಿಂದ ಉತ್ತರ ಕನ್ನಡ ಜಿಲ್ಲೆಯ ಆರೋಗ್ಯ ಮತ್ತು ಆರ್ಥಿಕ ವಲಯಗಳಲ್ಲಿ ಹೊಸ ಚೈತನ್ಯ ಮೂಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
