ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಜೊತೆಗೆ ಸರ್ಕಾರ ಪ್ರವಾಸಿಗರಿಗಾಗಿ ಹಾಳಮಡ್ಡಿ ಗ್ರಾಮದ ಕಾಳಿ ನದಿಯ ದಂಡೆಯಲ್ಲಿ ಮೊಸಳೆ ಪಾರ್ಕ್ ನ್ನು ನಿಮಿ೯ಸಿದೆ. ಮೊಸಳೆ ಪಾರ್ಕ್ ಗಿಂತ ಹೆಚ್ಚಿನ ಮೊಸಳೆಗಳು ಈಗ ಕಾಳಿ ನದಿಯ ಎಲ್ಲ ಭಾಗಗಳಲ್ಲೂ ವ್ಯಾಪಿಸಿದೆ.
ಎಲ್ಲೆಂದರಲ್ಲಿ ಮೊಸಳೆಗಳು ಜನವಸತಿ ಪ್ರದೇಶಗಳಿಗೆ ನುಗ್ಗಿ ಈ ಹಿಂದೆ ಹಾವಳಿ ಎಬ್ಬಿಸಿತ್ತು. ಕಾಳಿ ನದಿಗೆ ದಿನನಿತ್ಯದ ಕೆಲಸಗಳಿಗೆ ಕಾಲಿಡಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಐದು ವರ್ಷಗಳಲ್ಲಿ ನಾಲ್ವರು ನೀರಿಗಿಳಿದ ಮತ್ತು ದಂಡೆಯ ಮೇಲಿದ್ದವರನ್ನು ಎಳೆದೊಯ್ದು ಮೊಸಳೆ ಕೊಂದುಹಾಕಿದೆ. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಜನ ವಸತಿ ಪ್ರದೇಶದಲ್ಲಿ ಕಾಳಿ ನದಿ ದಂಡೆಗುಂಟ ಜನರು ನದಿಗಿಳಿಯದಂತೆ, ಬಟ್ಟೆ ತೊಳೆಯಲು, ಸ್ನಾನ ಮಾಡಲು ನೀರಿಗಿಳಿಯದಂತೆ ಕಬ್ಬಿಣದ ತಡೆಗೋಡೆ ಬೇಲಿಯನ್ನು ನಿರ್ಮಿಸಿದ್ದಾರೆ.
ತಡೆಗೋಡೆ ಬೇಲಿಯೊಳಗೆ ಮಹಿಳೆಯರಿಗೆ ಪಾತ್ರೆ, ಬಟ್ಟೆ ತೊಳೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೂ ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಸಾರ್ವಜನಿಕ ರಸ್ತೆ, ಗಟಾರುಗಳಲ್ಲೂ ಮೊಸಳೆ ಕಂಡು ಬಂದಿದ್ದು, ದನಕರುಗಳನ್ನು ಕೊಂದು ತಿಂದಿದೆ. ಇದೀಗ ನದಿ ದಂಡೆಯ ರಕ್ಷಣಾ ಬೇಲಿಗಳನ್ನು ದಾಟಿ ಮಹಿಳೆಯರು ಬಟ್ಟೆ ತೊಳೆದು, ಮಕ್ಕಳು ಸ್ನಾನ ಮಾಡುತ್ತಿದ್ದ ಜಾಗೆಗೂ ಮೊಸಳೆ ಎಂಟ್ರಿ ಕೊಟ್ಟಿದೆ.
ಅಲ್ಪ ಕಾಲ ಬಿಸಿಲಿಗೆ ಮೈಯೊಡ್ಡಿ ಮತ್ತೇ ನೀರಿಗಿಳಿದು ಹೋಗುತ್ತಿದೆ. ಇದರಿಂದ ಹಳೇ ದಾಂಡೇಲಿ,ಅಲಾಯಿಡ್ ಏರಿಯಾ, ಕೋಗಿಲಬನ, ಶಿವಮಂದಿರ ಸಮೀಪ ಸಾರ್ವಜನಿಕರು ಭಯದಿಂದಲೇ ತಿರುಗಾಡುವಂತಹ ಸ್ಥಿತಿ ಇದೆ. ತಡೆ ಬೇಲಿ ನಿರ್ಮಿಸಿದ ನಂತರ ಅವುಗಳನ್ನು ಪ್ರತಿ ವರ್ಷ ಪರಿಶೀಲನೆ ಮಾಡಬೇಕು.
ಮೊಸಳೆಗಳು ದಾರಿ ಮಾಡಿಕೊಂಡು ಜನವಸತಿ ಪ್ರದೇಶಗಳತ್ತ ನುಗ್ಗುತ್ತಿದೆ. ಅರಣ್ಯ ಇಲಾಖೆ ದಂಡೆಗುಂಟ ನಿರ್ಮಿಸಿದ ರಕ್ಷಣಾ ಬೇಲಿಗಳನ್ನು ಪರಿಶೀಲಿಸಿ ಮೊಸಳೆ ಪ್ರವೇಶಿಸುವ ಮಾರ್ಗಗಳನ್ನು ಬಂದ್ ಮಾಡಿ ಸೂಕ್ತ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

купить права