ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕಡಲ ತೀರದಲ್ಲಿ ಕಡಲ ಅಲೆಗಳ ರಭಸಕ್ಕೆ ಸಿಲುಕಿದ ಡಾಲ್ಪಿನ್ ಒಂದು ದಡಕ್ಕೆ ಬಂದು ಬಿದ್ದು ಪ್ರಾಣಾಪಾಯಕ್ಕೆ ಸಿಲುಕಿತ್ತು. ಇದನ್ನು ಕಂಡ ಸ್ಥಳೀಯ ಇಬ್ಬರು ಯುವಕರು ಮಾನವೀಯತೆ ಮೆರೆದು ಅದಕ್ಕೆ ಸೂಕ್ತ ಆರೈಕೆ ಮಾಡಿ ಸುರಕ್ಷಿತವಾಗಿ ಜೀವವುಳಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ.
ಪ್ರತಿಕೂಲ ಹವಾಮಾನದಿಂದ ಕಡಲ ಅಲೆಗಳ ರಭಸದಿಂದ ತಳ್ಳಲ್ಪಟ್ಟ 5ರಿಂದ 6 ಅಡಿ ಉದ್ದವಿದ್ದ ಡಾಲ್ಪಿನ್ ಒಂದು ಇಲ್ಲಿಯ ಸೂರ್ಯ ರೆಸಾರ್ಟ ಸಮೀಪದ ಕಡಲತೀರದಲ್ಲಿ ಬಿದ್ದು, ಉಸಿರಾಟದ ಸಮಸ್ಯೆಗೆ ಸಿಲುಕಿ ಸಂಕಷ್ಟದಲ್ಲಿತ್ತು. ಈ ಸಂಧರ್ಭದಲ್ಲಿ ರೆಸಾರ್ಟನ ಇಬ್ಬರು ಯುವಕರಾದ ಯಶವಂತ ಮಹಾ ಬಳೇಶ್ವರ ಗೌಡ ಮತ್ತು ಮಧು ಗೌಡ ಅವರು ಡಾಲ್ಪಿನ್ ಸಹಾಯಕ್ಕೆ ಬಂದು, ನಂತರ ಇತರರಿಂದಲೂ ನೆರವು ದೊರೆತು ಡಾಲ್ಪಿನ್ ಅನ್ನು ಆಳ ಸಮುದ್ರದ ನೀರಿಗೆ ತಳ್ಳುವಲ್ಲಿ ಯಶಸ್ವಿಯಾಗಿ ಸುರಕ್ಷಿತವಾಗಿ ಬಿಡಲಾಗಿದೆ.
ಈ ಇಬ್ಬರ ಸಾರ್ಥಕ ಪ್ರಯತ್ನದಿಂದ ಡಾಲ್ಪಿನ್ ಬದುಕುಳಿಯುವಂತಾಗಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.
