ಕಾರವಾರ: ರಾಜ್ಯ ಸರ್ಕಾರದ ಏಕೈಕ ಜಾಹೀರಾತು ಸಂಸ್ಥೆಯಾದ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಲಿಮಿಟೆಡ್ (KSMCA), ತನ್ನ ಯಶಸ್ವಿ ಕಾರ್ಯನಿರ್ವಹಣೆಯ ಫಲವಾಗಿ ರೂ.34.13 ಕೋಟಿಗಳ ವಿಶೇಷ ಲಾಭಾಂಶವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ.
ವಿಧಾನಸೌಧದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ, ಸಂಸ್ಥೆಯ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೃಷ್ಣ ಸೈಲ್ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಮೊತ್ತದ ಚೆಕ್ ಅನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ. ಪಾಟೀಲ್, ಸಂಸ್ಥೆಯು ಲಾಭದ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ಈ ಹಿಂದೆ ಸಂಸ್ಥೆಯು ನಿರ್ವಹಿಸುತ್ತಿದ್ದ ಅಬಕಾರಿ ಭದ್ರತಾ ಚೀಟಿ ಮುದ್ರಣ ಮತ್ತು ಮಾರಾಟದ ವ್ಯವಹಾರ ಕೈತಪ್ಪಿ ಹೋಗಿದ್ದರಿಂದ ಸಂಸ್ಥೆಯ ಲಾಭದಾಯಕತೆ ಕಡಿಮೆಯಾಗಿದೆ ಎಂದು ಗಮನಸೆಳೆದರು.
ಸಂಸ್ಥೆಯ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲು ಈ ವ್ಯವಹಾರವನ್ನು ಮತ್ತೆ ಕೆಎಸ್‌ಎಂಸಿಎಗೆ ವಹಿಸಿಕೊಡುವಂತೆ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಬಳಿಕ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಸತೀಶ್ ಸೈಲ್ ಅವರು, ಸಂಸ್ಥೆಗೆ ನೀಡಲಾಗಿರುವ 4ಜಿ ವಿನಾಯಿತಿಯಲ್ಲಿ ‘ಡಿಜಿಟಲೈಜೇಶನ್’ ಚಟುವಟಿಕೆಗಳನ್ನು ಹೆಚ್ಚುವರಿಯಾಗಿ ಸೇರಿಸಬೇಕು ಹಾಗೂ ಜಾಹೀರಾತು ಬಿಡುಗಡೆ ಮಾಡಿದ ಬಾಕಿ ಹಣವನ್ನು ಎಲ್ಲಾ ಇಲಾಖೆಗಳು ಸಕಾಲದಲ್ಲಿ ಪಾವತಿಸಲು ನಿರ್ದೇಶನ ನೀಡಬೇಕೆಂದು ಕೋರಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮದ್ ಅತೀಕುಲ್ಲಾ ಶರೀಫ್ ಮತ್ತು ಉಪ ಪ್ರಧಾನ ವ್ಯವಸ್ಥಾಪಕ ಪಿ.ಎಸ್. ನಂದೀಶ ಸಹ ಉಪಸ್ಥಿತರಿದ್ದರು.
