ಕೇಂದ್ರ ಸರ್ಕಾರವೇ ಘೋಷಿಸಿಕೊಂಡಿರುವ ಗಂಗಾ- ಯಮುನಾ ಶುದ್ಧೀಕರಣ ಇನ್ನೂ ನಿಲುಕದ ಸ್ಥಿತಿಯಲ್ಲಿದೆ. ಏಕೆಂದರೆ ಹತ್ತಾರು ಸಾವಿರ ಕೋಟಿಯನ್ನು ವೆಚ್ಚ ಮಾಡಿದರೂ ವಾರಾಣಸಿಯಲ್ಲಿ ಹೆಣ ತೇಲುವುದು ನಿಂತಿಲ್ಲ.
ಬಿಹಾರದ ಚುನಾವಣೆಯಲ್ಲಿ ಯಮುನೆ ಧ್ವನಿ ಎತ್ತಿದ್ದಾಳೆ. ದೇಶದಲ್ಲಿಯೇ ಅತ್ಯಂತ ಕಲ್ಮಶ, ಕೆಸರು, ಮಾಲಿನ್ಯ ಭರಿತ ಯಮುನೆ ನೀರನ್ನು ರಾಜಕೀಯ ಹುರಿಯಾಳುಗಳು, ಪಕ್ಷಗಳು ಪರಸ್ಪರ ಎರಚಿಕೊಳ್ಳುತ್ತಿದ್ದಾರೆ. ಯಮುನೆಯನ್ನು ಶುದ್ಧೀಕರಿಸಿದ್ದೇವೆ. ಶುದ್ಧ, ಶಾಂತ, ಸ್ವಚ್ಛವಾಗಿ ಯಮುನೆ ಹರಿಯುತ್ತಿದ್ದಾಳೆ ಎಂದು ದೆಹಲಿ ಮುಖ್ಯಮಂತ್ರಿ, ದೇಶದ ಪ್ರಧಾನಿಯಾದಿಯಾಗಿ ಘೋಷಿಸುತ್ತಿದ್ದರೆ, ಯಮುನಾ ಸ್ವಚ್ಛಗೊಳಿಸುವಿಕೆಯಲ್ಲಿ ನಡೆದಿರುವ ಘೋಟಾಲಾ (ಗೋಲ್‌ಮಾಲ್) ತನಿಖೆಯಾಗಲಿ ಎಂದು ಕೆಸರು ನೀರನ್ನು ಪ್ರತಿಸ್ಪರ್ಧಿಗಳಿಗೆ ಎರಚಲಾಗುತ್ತಿದೆ.
ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಯಮುನಾ ಶುದ್ಧೀಕರಣ ಯೋಜನೆ ಜಾರಿಗೊಳಿಸಲಾಗಿದೆ. ಈಗ ಯಮುನೆ, ಸ್ವಚ್ಛ, ಸುಂದರ, ಪ್ರಶಾಂತ ಎಂದು ಘೋಷಿಸಿ ಯಮುನಾ ಪೂಜೆಯನ್ನು ಮಾಡಲಾಯಿತು. ಆದರೆ ಯಮುನಾ ನದಿಯ ಪಕ್ಕವೇ ಒಂದು ಕೆರೆ ನಿರ್ಮಿಸಿ ಅದಕ್ಕೆ ನೀರು ಹರಿಸಿ ರಾಸಾಯನಿಕ ಪದಾರ್ಥಗಳಿಂದ ಶುಭ್ರಗೊಳಿಸಿ, ಹಿಡಿದಿಟ್ಟ ಯಮುನೆಗೆ ಪೂಜೆ ಮಾಡುವ ಸಂಭ್ರಮ ನಡೆಯಿತು ಎನ್ನುವ ವರದಿಯನ್ನು ಬಿಬಿಸಿ ಬಿತ್ತರಿಸಿದಾಗಲೇ ನಿಜ ಸಂಗತಿ ಬಯಲಾಯಿತು.
ಈ ಕೆರೆಯ ಪಕ್ಕವೇ ಎಲ್ಲ ಕಾರ್ಖಾನೆಗಳ ಮಾಲಿನ್ಯ, ತ್ಯಾಜ್ಯ, ಇಡೀ ದೆಹಲಿ ನಗರದ ಒಳಚರಂಡಿ, ಜನ ಜಾನುವಾರುಗಳ ಮಲಮೂತ್ರ, ತ್ಯಾಜ್ಯ ವಸ್ತುಗಳು ಹಾಗೇ ಮಾನವರ ಹೆಣ ಎಲ್ಲವುಗಳನ್ನೂ ಹೊತ್ತುಕೊಂಡು ಯಮುನೆ ಹರಿಯುತ್ತಳೇ ಇದ್ದಾಳೆ. ಮುಂದೆ ಹರಿಯಾಣಾ- ಬಿಹಾರಕ್ಕೆ ಶುದ್ಧ ನೀರು ಕೊಡುತ್ತಿದ್ದೇವೆ. ಅದಕ್ಕಾಗಿಯೇ ಯಮುನೆಯ ಶುದ್ಧೀಕರಣ ಕೈಗೊಂಡಿದ್ದೇವೆ ಎನ್ನುವ ಮಹಾ ಘೋಷಣೆ ಚುನಾವಣಾ ರಣರಂಗದಲ್ಲಿ ಕೇಳಿ ಬಂದಿದೆ.
ಯಮುನೆ ಶುದ್ಧವಾದಳಾ..?! ಎಂದು? ಎಲ್ಲಿ? `ನಿತ್ಯ ಯಮುನೆಯ ಮಲೀನ ನೀರನ್ನು ಕಾಣುವ, ಅದರ ಕೆಸರಿನಲ್ಲಿಯೇ ಬದುಕುತ್ತಿರುವ, ದುರ್ವಾಸನೆಯನ್ನು ಸೇವಿಸುತ್ತಿರು ಬಿಹಾರಿ ಮಂದಿ ಪ್ರಶ್ನಿಸುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಕೋಟ್ಯಂತರ ಮಂದಿ ದಿನಕ್ಕೆ ಸ್ನಾನ ಮಾಡಿ, ಶೌಚ ಎಸಗಿ, ಕಲ್ಮಶಗೊಂಡಾಗ ಸರ್ಕಾರವೇ ಅಸಹಾಯಕವಾಗಿತ್ತು. ಸುಮಾರು 40 ಕೋಟಿ ಜನತೆಯ ಮಾಲಿನ್ಯ ಗಂಗೆಯಲ್ಲಿ ತುಂಬಿಕೊAಡಿತ್ತು. ಇನ್ನೂ ಅದು ಶುದ್ಧವಾಗಿಲ್ಲ. ಕುಂಭಮೇಳ ಗಂಗೆಯ ಪಾವಿತ್ರ್ಯಕ್ಕೆ ಮತ್ತಷ್ಟು ಮೈಲಿಗೆ ಎಸಗಿತು.
ಗಂಗೆ, ಬ್ರಹ್ಮಪುತ್ರ, ಸಿಂಧು, ಅಲ್ಲಿಂದ ಕಾವೇರಿವರೆಗೆ ಈಗ ಕುಡಿಯಲು ಯೋಗ್ಯವಿಲ್ಲದ ನದಿಯ ನೀರಿನ ಸ್ಥಿತಿ ವರದಿಯಾಗಿದೆ. ಇತ್ತೀಚಿಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ಸಿದ್ಧಪಡಿಸಿದ ವರದಿಯಲ್ಲಿ ಕರ್ನಾಟಕದ ಹನ್ನೆರಡು ಪ್ರಮುಖ ನದಿಗಳ ನೀರು ಕುಡಿಯಲು ಯೋಗ್ಯವಿಲ್ಲ, ಕಲುಷಿತವಾಗಿದೆ ಎಂದು ಘೋಷಿಸಿದೆ.
ಬೆಂಗಳೂರು- ಮೈಸೂರು ಸೇರಿದಂತೆ ತಟದ ಅಂಚಿನ ಮಕ್ಕಳಿಗೆ ನೀರು ಉಣಿಸುವ ಕಾವೇರಿ ನದಿಯ ನೀರು ಕುಡಿಯಲು ಯೋಗ್ಯವೇ ಇಲ್ಲ. ಅದು ಡಿ' ದರ್ಜೆಗಿಂತ ಕಳಪೆಯಾಗಿದೆ. ಹಾಗಿದ್ದೂ ಮುಂದೇನು? ಈ ಪ್ರಶ್ನೆಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸವಾಲು ಹಾಕಿದೆ. ಕಾವೇರಿಯಷ್ಟೇ ಅಲ್ಲ. ಲಕ್ಷ್ಮಣತೀರ್ಥ, ತುಂಗಭದ್ರಾ, ಶಿಂಶಾ, ಕೃಷ್ಣಾ ಇವೆಲ್ಲಡಿ’ ದರ್ಜೆಯ, ಕುಡಿಯಲು ಯೋಗ್ಯವಲ್ಲದ ಸ್ಥಿತಿಯಲ್ಲಿವೆ ಎಂದು ಹೇಳಿದೆ. ಭೀಮಾ, ಕಾಗಿಣಾ, ಅರ್ಕಾವತಿ ಇತ್ಯಾದಿಗಳೆಲ್ಲ ಕಾವೇರಿ, ಕಬಿನಿಗಿಂತಲೂ ಕೆಳ ಮಟ್ಟದಲ್ಲಿವೆ.
ಯಮುನೆಯಲ್ಲಿ ಬೊಗಸೆ ನೀರು ಹಿಡಿದರೆ, ಕಪ್ಪು ಕಣಗಳ, ಕೊಳೆತ ವಾಸನೆಯುಕ್ತ ನೀರು ರಾಚುತ್ತದೆ. ಕೊಳೆತ ವಾಸನೆ ಬರುತ್ತದೆ. ಕಾವೇರಿ ನೀರೂ ಆ ಮಟ್ಟಕ್ಕೆ ಹೋದಿತು ಎಂಬ ಎಚ್ಚರಿಕೆಯನ್ನು ಈಗಾಗಲೇ ನೀಡಲಾಗಿದೆ. ಒಳಚರಂಡಿಗಳ ಪ್ಲಾಸ್ಟಿಕ್, ಕೈಗಾರಿಕಾ ತ್ಯಾಜ್ಯ, ಕೋಳಿ ಫರ‍್ಮ್ ಇತ್ಯಾದಿಗಳು ಇಡೀ ಕಾವೇರಿ, ಕಪಿಲಾ, ಕಬಿನಿಯಲ್ಲಿ ಢಾಳಾಗಿ ಸೇರಿಕೊಳ್ಳುತ್ತಿದೆ. ಯಾವ ನಿಯಂತ್ರಣವಿಲ್ಲ. ಯಾರ ಮಾನ್ಯತೆಯೂ ಈ ಘಟಕಗಳಿಗೆ ಬೇಕಿಲ್ಲ. ಯಾವುದೇ ಕಾನೂನು, ಕಟ್ಟಳೆ… ಊಹುಂ !
ನೇತ್ರಾವತಿ ನದಿ ನೀರು ಮಾತ್ರ `ಬಿ’ ದರ್ಜೆಯ ಗುಣಮಟ್ಟ ಹೊಂದಿದೆ. ಹಾಗೆಂದು ಇದು ಸಂಪೂರ್ಣ ಕುಡಿಯಲು ಯೋಗ್ಯ ಎನ್ನುವಂತಿಲ್ಲ. ನೇತ್ರಾವತಿ ನದಿ ನೀರನ್ನು ಶುದ್ಧೀಕರಿಸಲು ಒಂದು ರೂಪಾಯಿ ಖರ್ಚು ಮಾಡಿದರೆ, ಅದೇ ಕಾವೇರಿ, ಕಬಿನಿ, ಕಪಿಲಾ ನೀರನ್ನು ಶುದ್ಧೀಕರಿಸಲು 3 ರೂಪಾಯಿ ತಗಲುತ್ತಿದೆ!.
ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ನಗರ ಪ್ರದೇಶ ವಿಸ್ತರಿಸಿದಂತೆ ನದಿಗಳ ಕಲ್ಮಶ ಹೆಚ್ಚುತ್ತ ಹೋಗುತ್ತದೆ. ಸುಮಾರು ಮೂರು ದಶಕಗಳ ಹಿಂದೆ ಕಾಳಿ ನದಿ ನೀರನ್ನು ದಾಂಡೇಲಿ, ಮಲ್ಲಾಪುರ, ಕದ್ರಾ, ಕೈಗಾ, ಕೊಡಸಳ್ಳಿ ಯೋಜನೆಗಳ ಸಂತ್ರಸ್ತರಿಗೆ, ಜನರಿಗೆ ಮತ್ತು ಹಳ್ಳಿಗಳಿಗೆ ಪೂರೈಸಬೇಕು ಎಂದಾಗ `ಕುಡಿಯಲು ಯೋಗ್ಯವಲ್ಲ’ ಎಂದು ವರದಿ ಬಂತು.
ಆದ್ದರಿಂದ ದಾಂಡೇಲಿ ನಗರಕ್ಕೆ ಸನಿಹದ ನದಿಯಿಂದ ನೀರು ಪೂರೈಸಲಾಯಿತು. ಈಗ ಕಾಳಿ ನದಿಯನ್ನು ಪಕ್ಕದಲ್ಲಿ ಸಂಗ್ರಹಿಸಿ, ಶುದ್ಧೀಕರಿಸಿ, ನಂತರ ಹಳಿಯಾಳ- ದಾಂಡೇಲಿಗೆ ಪೂರೈಸಲು ಯೋಜನೆ ರೂಪಿಸಲಾಗಿದೆ. ಕಾಳಿಯನ್ನು ಮಲಪ್ರಭೆಗೆ ಸೇರಿಸುವ ಉದ್ಯಮಿಯೊಬ್ಬರ ಪ್ರಯತ್ನಕ್ಕೆ ಸಮಸ್ಯೆ ತಂದಿದ್ದೇ ಅಲ್ಲಿನ ಮಾಲಿನ್ಯ ಮತ್ತು ವಿದ್ಯುತ್ ಉತ್ಪಾದನೆ ಯೋಜನೆಗಳು.
ಕಾವೇರಿ ನದಿಗೆ ಬರೋಣ. ಸ್ವತಃ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರೇ ರಾಜ್ಯದ ನದಿಗಳ ಸ್ಥಿತಿಯನ್ನು ಬಹಿರಂಗಪಡಿಸಿದಾಗ ಜನತೆ ಬೆಚ್ಚಿ ಬಿದ್ದರು. ಮುಂದೇನು? ಕಲುಷಿತ ನೀರಿನ ಶುದ್ಧೀಕರಣ ಹೇಗೆ? ಇಷ್ಟಾಗಿಯೂ ಇನ್ನು ಮೇಲಷ್ಟೇ ಇವುಗಳಿಗೆ ಯೋಜನೆ ಆಗಬೇಕಿದೆ. ಕೇಂದ್ರ ಸರ್ಕಾರವೇ ಘೋಷಿಸಿಕೊಂಡಿರುವ ಗಂಗಾ- ಯಮುನಾ ಶುದ್ಧೀಕರಣ ಇನ್ನೂ ನಿಲುಕದ ಸ್ಥಿತಿಯಲ್ಲಿದೆ. ಏಕೆಂದರೆ ಹತ್ತಾರು ಸಾವಿರ ಕೋಟಿಯನ್ನು ವೆಚ್ಚ ಮಾಡಿದರೂ ವಾರಾಣಸಿಯಲ್ಲಿ ಹೆಣ ತೇಲುವುದು ನಿಂತಿಲ್ಲ. ದೆಹಲಿಯಲ್ಲಿ ಚರಂಡಿ ನೀರು ಹಾಗೂ ಕೈಗಾರಿಕಾ ಮಾಲಿನ್ಯದ ಸಮಸ್ಯೆ ಯಮುನೆ, ಗಂಗೆ ಸೇರುತ್ತಲೇ ಇದೆ.
ಈ ನಡುವೆ ನದಿಗಳ ಶುದ್ಧೀಕರಣ ಹೆಸರಿನಲ್ಲಿ ಸಹಸ್ರಾರು ಕೋಟಿ ಲೂಟಿಯಾಗಿದೆ ಎಂಬ ವರದಿಗಳು ಬಹಿರಂಗವಾಗುತ್ತಿವೆ. ವಿವಾದ ಕೇಂದ್ರ- ರಾಜ್ಯ ಸರ್ಕಾರಗಳ ಸುತ್ತ ಗಿರಕಿ ಹೊಡೆಯುತ್ತಿದೆ. ಸಾವಿರಾರು ಕೋಟಿ ದುಡ್ಡು ವ್ಯಯವಾಯಿತು. ನದಿ ನೀರು ಇನ್ನಷ್ಟು ಕಲುಷಿತವಾಯಿತು. ಯಮುನೆ ಮತ್ತಷ್ಟು ಕಲ್ಮಷಗೊಂಡಳು ಎನ್ನುವುದು ಈಗಿರುವ ಸ್ಲೋಗನ್- ಯಮುನಾ ಘೋಟಾಲಾ !
ಹಾಗೇ ಗಂಗೆಯ ಸ್ಥಿತಿ ಕೂಡ. ಇಷ್ಟೇ ಅಲ್ಲ. ರಾಜ್ಯದ ಎಲ್ಲ ನಗರಗಳ ಅಂಚಿನಲ್ಲಿರುವ ನದಿಗಳ ಕಥೆಯೂ ಇದೇ. ಮಾಲಿನ್ಯ ನಿಯಂತ್ರಣ ಮಂಡಳಿ, ಕಾಯ್ದೆ ಕಟ್ಟಳೆಗಳು ಪೇಪರ್ ಟೈಗರ್‌ನಂತಾಗಿವೆ. 1971ರಲ್ಲೇ ಕೇಂದ್ರ ಸರ್ಕಾರ, ಜಲ ಮಾಲಿನ್ಯದ ವಿರುದ್ಧ ಒಂದು ಕಾನೂನು ತಂದಿತು. ತ್ಯಾಜ್ಯ ವಸ್ತುಗಳು, ಕೈಗಾರಿಕಾ ಮಾಲಿನ್ಯ, ಒಳಚರಂಡಿ ಮೊದಲಾದವುಗಳನ್ನು ನೇರವಾಗಿ ನದಿಗೆ ಬಿಡುವುದನ್ನು ನಿಷೇಧಿಸಿ, ಕ್ರಿಮಿನಲ್ ಅಪರಾಧವನ್ನಾಗಿಸುವ ಕಾಯ್ದೆ ಇದು.
ಆದರೆ ಈ ಕಾಯ್ದೆಯು ಅಧಿಕಾರಿಗಳ, ಮಹಾನಗರ ಪಾಲಿಕೆ ಸಿಬ್ಬಂದಿಗಳ, ಸದಸ್ಯರುಗಳ, ಶಾಸಕರುಗಳ ಹಣ ಪೀಕುವ ಪಟ್ಟಭದ್ರರ ದಂಧೆಯಾಗಿಬಿಟ್ಟಿದೆಯೇ ವಿನಾ ಪ್ರಯೋಜನವಾಗಿಲ್ಲ. ನದಿಗಳು ಮತ್ತಷ್ಟು ಕಲುಷಿತಗೊಳ್ಳುತ್ತಲೇ ಹೋಗಿವೆ. ಈಗಲೂ ಅದೇ ಸ್ಥಿತಿ. ಬೆಂಗಳೂರಿನ ಶಿಂಶಾ ನದಿ ದಿನಾ ಬೆಳಗಾದರೆ ನೊರೆಯ ಮೂಲಕ ಮಾಲಿನ್ಯವನ್ನು ತೆರೆದಿಡುತ್ತಿದೆ. ಇಲ್ಲಿ ಮಾಲಿನ್ಯ ಕುಣಿಯುತ್ತಿದೆ. ಗಣಿಗಾರಿಕೆಯ ಅದಿರು- ಮಣ್ಣು ತುಂಗಭದ್ರಾ ಆಣೆಕಟ್ಟೆಯನ್ನೇ ಕಬಳಿಸುವ ಹಂತಕ್ಕೆ ಬಂದಿವೆ.
ಆದರೆ ಇವ್ಯಾವುವೂ ಸರ್ಕಾರದ ಮತ್ತು ಆಳುವ ಪ್ರಭುಗಳ ಕಣ್ತೆರೆಸಿಲ್ಲ. ಸ್ವತಃ ಶಾಸಕರಾಗಿರುವ ಪಿ.ಎಂ.ನರೇAದ್ರಸ್ವಾಮಿ ಈಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರು. ವಿಷಯವನ್ನು ಇಷ್ಟಕ್ಕೇ ಬಿಡಲಾಗದು. ನದಿ ಶುದ್ಧೀಕರಿಸುವ ಗ್ಯಾರಂಟಿ, ಅನುದಾನ, ಯೋಜನೆಗಳು ಬೇಕಲ್ಲವೇ? ಇಡೀ ದೇಶದಲ್ಲಿ ಒಂದೆಡೆ ನದಿ ಕಣಿವೆಗಳು ಬತ್ತಿ ಹೋಗುತ್ತಿವೆ. ನದಿಗಳ ಉಗಮ ಸ್ಥಾನವೇ ಕಲುಷಿತಗೊಂಡಿದೆ.
ಇನ್ನೊಂದೆಡೆ ಎಲ್ಲ ನದಿಗಳೂ ತ್ಯಾಜ್ಯ ಬಿಸಾಕುವ ಸ್ಥಳಗಳಾಗಿವೆ. ಬಿಹಾರದ ಚುನಾವಣೆಯಲ್ಲಿ ಯಮುನೆ ರಾಜಕೀಯ ಕೆಸರೆರಚಾಟ ನಡೆದಿದ್ದರೆ, ಕರ್ನಾಟಕದಲ್ಲಿ ಹನ್ನೆರಡು ನದಿಗಳ ಮಾಲಿನ್ಯ ಭಯ ಹುಟ್ಟಿಸಿದೆ. ಇಷ್ಟಕ್ಕೂ ಸರ್ಕಾರದ ಜವಾಬ್ದಾರಿಯಷ್ಟೇ ಇದಲ್ಲ. ಜನರ ಜಾಗೃತಿ, ಕರ್ತವ್ಯ, ಮಾಲಿನ್ಯ ಮಾಡದಂತೆ ನಿಯಂತ್ರಣ ಹಾಕಿಕೊಳ್ಳುವುದು ಹಾಗೂ ಇವುಗಳ ಜೊತೆಗೆ ನಮ್ಮ ಆಡಳಿತ ವ್ಯವಸ್ಥೆಯಿಂದ ಬಿಗಿ ಅತ್ಯಂತ ಪ್ರಾಮಾಣಿಕವಾಗಿ ಆಗಬೇಕಿದೆ.
ಯಮುನೆಯಷ್ಟೇ ಅಲ್ಲ ಕಾವೇರಿ ಕೃಷ್ಣೆ ಭದ್ರೆಯೂ ಮಲಿನಗೋಡಿದ್ದಾಳೆ… ರಾಜಕೀಯ ಅಂಗಣದಲ್ಲಿ ಇದರ ಕೂಗು ಮಾರ್ದನಿಸಬೇಕು.. ಜನ ಪ್ರಶ್ನಿಸಬೇಕು. ಇಲ್ಲವಾದರೆ ಭವಿಷ್ಯದ ಮಕ್ಕಳಿಗೆ ಮಾಲಿನ್ಯಯುಕ್ತ ನೀರೇ ನಾವು ಬಿಟ್ಟು ಹೋಗುವ ಕೊಡುಗೆ ಆಗಬಾರದು ಅಲ್ಲವೇ?
