ದಾಂಡೇಲಿ (ಉತ್ತರ ಕನ್ನಡ): ದಾಂಡೇಲಿ ನಗರಸಭೆಯಲ್ಲಿ ಹಲವು ವರ್ಷಗಳಿಂದ ನಡೆಯುತ್ತಿದ್ದ ಅವ್ಯವಹಾರ, ಪ್ರಭಾವಿಗಳ ಕಬಳಿಕೆ, ಹಾಗೂ ಆಶ್ರಯ ಯೋಜನೆಗಳ ಹೆಸರಿನಲ್ಲಿ ನಡೆದಿರುವ ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ ನಗರಸಭೆಯ ಹೊಸ ಪೌರಾಯುಕ್ತರು ವಿವೇಕ ಬನ್ನೆ ದಿಟ್ಟ ಕ್ರಮಗಳನ್ನು ಕೈಗೊಂಡಿದ್ದು, ನಗರದಲ್ಲಿ ಭೂಮಿಗಾರಿಕೆ ಮೂಲಕ ಕಬಳಿಸಲಾಗುತ್ತಿದ್ದ ಬೆಲೆಬಾಳುವ ನಿವೇಶನಗಳನ್ನು ಉಳಿಸುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ.
ನಗರಸಭೆಯ ಆಸ್ತಿಗಳ ಮೇಲೆ ಅಕ್ರಮವಾಗಿ ನಿರ್ಮಾಣ ಮಾಡುತ್ತಿದ್ದವರು ಕಾನೂನಿನ ಜಾಲಕ್ಕೆ ಸಿಲುಕಲಿದ್ದಾರೆ ಎಂಬ ಎಚ್ಚರಿಕೆ ನೀಡುವ ರೀತಿಯಲ್ಲಿ, “ಇದು ನಗರಸಭೆಯ ಆಸ್ತಿ – ಅತಿಕ್ರಮಿಸಿದರೆ ಕಾನೂನು ಕ್ರಮ” ಎಂಬ ಬೋರ್ಡ್‌ಗಳನ್ನು ಹಾಕುವ ಮೂಲಕ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.
ಸಂಯುಕ್ತ ಕರ್ನಾಟಕ ವರದಿಯ ಪರಿಣಾಮ: ಸಂಯುಕ್ತ ಕರ್ನಾಟಕ ಪತ್ರಿಕೆ ಮತ್ತು ಸ್ಥಳೀಯ ಮಾಧ್ಯಮಗಳಲ್ಲಿ ದಾಂಡೇಲಿಯ ಭೂಮಿಗಾರಿಕೆ, ಆಶ್ರಯ ಯೋಜನೆಗಳ ಹೆಸರಿನಲ್ಲಿ ಶ್ರೀಮಂತರಿಗೆ ತಪ್ಪಾಗಿ ನೀಡಲಾಗಿರುವ ಸೈಟ್‌ಗಳು, ಅಪ್ರಮಾಣಿಕ ದಾಖಲೆಗಳ ಆಧಾರದ ಮೇಲೆ ಮಾಡಲಾಗಿರುವ ಹಂಚಿಕೆಗಳು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ನಿರಂತರವಾಗಿ ವರದಿಗಳು ಪ್ರಕಟವಾಗುತ್ತಿವೆ. ಈ ವರದಿಗಳ ಪರಿಣಾಮವಾಗಿ ಈಗ ನಗರಸಭೆಯಲ್ಲಿ ಹೊಸ ಚಲನವಲನ ಆರಂಭವಾಗಿದೆ.
ಯುಟ್ಯೂಬರ್ ಪತ್ರಕರ್ತನ ಪತ್ನಿಯ ಅಕ್ರಮ – ಮಹಿಳೆಯರ ಪ್ರತಿಭಟನೆ: ಇತ್ತೀಚಿಗೆ ಯುಟ್ಯೂಬರ್ ಪತ್ರಕರ್ತ ಸಂದೇಶ ಜೈನ್ ಅವರ ಪತ್ನಿ ಪದ್ಮಶ್ರೀ ಇವರ ಹೆಸರಿನಲ್ಲಿ, ಹಿಂದಿನ ಪೌರಾಯುಕ್ತರಿಂದ ಅಕ್ರಮ ನಿವೇಶನ ಹಂಚಿಕೆ ಪತ್ರ ತೆಗೆದುಕೊಂಡಿದ್ದು, ಯಾವುದೇ ದಾಖಲೆ, ಅನುಮತಿ ಇಲ್ಲದೆ ಮೌಲ್ಯಮಯ ಸೈಟ್ ಅನ್ನು ಕಬಳಿಸಿದ್ದ ಪ್ರಕರಣ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು.
ಈ ಅಕ್ರಮದ ವಿರುದ್ಧ ಸ್ಥಳೀಯ ಮಹಿಳೆಯರು “ನಮಗೂ ಜಾಗ ಕೊಡಿ” ಎಂದು ಮೂರು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದು, ಇದರ ಜಾಗೃತಿಯಿಂದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ತೆರಳಿ ಅತಿಕ್ರಮಣ ತೆರವುಗೊಳಿಸಿದರು.
ದಾಂಡೇಲಿಯಲ್ಲಿ ಅಕ್ರಮ ನಿವೇಶನ ಹಂಚಿಕೆಯ ಗಾತ್ರ ಎಷ್ಟು?: ದಾಂಡೇಲಿಯಲ್ಲಿ ಸುಮಾರು 12,000 ಕುಟುಂಬಗಳು ಮನೆಯನ್ನೋ/ನಿವೇಶನವನ್ನೋ ಹೊಂದಿವೆ. ವಿವಿಧ ಆಶ್ರಯ ಯೋಜನೆ, ಕೊಳಚೆ ನಿರ್ಮೂಲನಾ ಮಂಡಳಿ, ಜಿ+2, ಹಾಗೂ ಇತರೆ ಯೋಜನೆಗಳಲ್ಲಿ 7,500 ನಿವೇಶನ ಹಾಗೂ ಮನೆಗಳು ಹಂಚಿಕೆಯಾಗಿದೆ. ಇನ್ನೂ 3,000 ಹೊಸ ಅರ್ಜಿಗಳು ಬಾಕಿಯಿದೆ.
ಇವುಗಳ ಮೂಲ, ಹಂಚಿಕೆಯ ವಿಧಾನ ಹಾಗೂ ಅರ್ಹತೆಗಳ ಬಗ್ಗೆ ದೊಡ್ಡ ಸಂಶಯಗಳಿದ್ದು, ಹಿಂದಿನ ಪೌರಾಯುಕ್ತ ಗಣಪತಿ ಶಾಸ್ತ್ರಿ ನೀಡಿದ ವರದಿ ಆಧಾರದ ಮೇಲೆ ಲೋಕಾಯುಕ್ತ 1,600ಕ್ಕೂ ಹೆಚ್ಚು ಪ್ರಕರಣಗಳ ವಿಚಾರಣೆ ಆರಂಭಿಸಿದೆ.
ಯೋಜನಾ ಉಲ್ಲಂಘನೆಗೆ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ ಧ್ವನಿ: ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ, ದಾಂಡೇಲಿಗೆ ಇದ್ದ ಮಾಸ್ಟರ್ ಪ್ಲಾನ್ ಪ್ರಕಾರವೇ ನಿವೇಶನಗಳನ್ನು ಹಂಚಬೇಕಿತ್ತು ಎಂದು, ಆದರೆ ಅದನ್ನು ಉಲ್ಲಂಘಿಸಿ ಮೌಲ್ಯಮಯ ಜಾಗಗಳನ್ನು ಕಬಳಿಸುವ ಕೆಲಸ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ಸಲ್ಲಿಸಿರುವ ಅಫಿಡವಿಟ್ ಆಧಾರದ ಮೇಲೆ, ಈಗ ಹಲವಾರು ಭೂಗಳ್ಳರ ಎದೆಗಳಲ್ಲಿ ನಡುಕ ಶುರುವಾಗಿದೆ.
ಪೌರಾಯುಕ್ತರ ತೀರ್ಮಾನಿತ ಕ್ರಮಗಳು: ಈ ಪೈಕಿ ಅಧಿಕಾರಿಗಳು ಯಾವುದು ಕಾನೂನುಸಮ್ಮತ, ಯಾವುದು ಅಕ್ರಮ ಎಂಬುದು ಸ್ಪಷ್ಟಪಡಿಸಲು ಹಿಂಜರಿಯುತ್ತಿದ್ದರೂ, ಪೌರಾಯುಕ್ತ ವಿವೇಕ ಬನ್ನೆ ಅವರು ನಗರಸಭೆಯ ಆಸ್ತಿಗಳ ರಕ್ಷಣೆ ಮತ್ತು ಅತಿಕ್ರಮಣ ತೆರವು ಮಾಡುವುದುರ ಜೋತೆಗೆ ಅಕ್ರಮ ಸೈಟ್ ಕಬಳಿಕೆ ವಿರುದ್ಧ ಕಾನೂನು ಕ್ರಮಗಳ ಮೂಲಕ ಸ್ಪಷ್ಟ ನಿಲುವು ತೆಗೆದುಕೊಂಡಿದ್ದು, ಈ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆಯುತ್ತಿದೆ.
