ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೋಯಡಾ ತಹಶೀಲದಾರ ಕಚೇರಿ ಎದುರು ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಗ್ರಾಮಸ್ಥರ ಅಹೋರಾತ್ರಿ ಸತ್ಯಾಗ್ರಹ ಪ್ರತಿಭಟನೆಗೆ ಕೊನೆಗೂ ತಹಶೀಲದಾರರ ಮಧ್ಯಸ್ಥಿಕೆ ದೊರಕಿದೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದ್ದ ಗ್ರಾಮಸ್ಥರ ಧ್ವನಿಗೆ ಮಂಗಳವಾರ ತಾಲೂಕಾ ಮಟ್ಟದ ಅಧಿಕಾರಿಗಳು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಹಲವು ಬೇಡಿಕೆಗಳಿಗೆ ಸ್ಪಷ್ಟ ಭರವಸೆ ನೀಡಲಾಗಿದೆ.
ಸಭೆಯ ಬಳಿಕ ಗ್ರಾಮಸ್ಥರು ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದು, ಮೂರು ವಾರಗಳಲ್ಲಿ ಸಮಸ್ಯೆ ಬಗೆಹರಿಸಲಾಗದಿದ್ದರೆ ಮುಂದಿನ ಹಂತವಾಗಿ ಜೋಯಡಾದಿಂದ ಹಳಿಯಾಳ ಶಾಸಕರ ಮನೆವರೆಗೂ ಪಾದಯಾತ್ರೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಸಭೆಯ ಪ್ರಮುಖ ಅಂಶಗಳು ಮತ್ತು ಭರವಸೆಗಳು:
ಕಿರವತ್ತಿ–ಕಾರ್ಟೋಳಿ–ಡಿಗ್ಗಿ–ಗೋವಾ ಗಡಿ ರಾಜ್ಯ ಹೆದ್ದಾರಿ ಸುಧಾರಣೆ: ಅನುದಾನ ಇರುವ ಭಾಗದ ಕಾಮಗಾರಿ ನವೆಂಬರ್ 25ರಿಂದ ಪ್ರಾರಂಭಿಸಲು ತೀರ್ಮಾನ.
ಡಿಗ್ಗಿ–ವಾಗೇಲಿ ರಸ್ತೆ ಡಾಂಬರೀಕರಣ: ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಕೆ.
ಕಿರವತ್ತಿ, ತೆರಾಳಿ, ಸಿಸೈ, ದುಧಮಾಳ ರಸ್ತೆ ಡಾಂಬರೀಕರಣ: ಗ್ರಾಮಪಂಚಾಯಿತಿ ಮತ್ತು ತಾಪಂ ಮಟ್ಟದಲ್ಲಿ ಯೋಜನೆ ರೂಪಿಸಲು ಭರವಸೆ.
ಗ್ರಾಮ ಬಸ್ ಸೇವೆ: ಜೋಯಡಾದಿಂದ ಕಾರ್ಟೋಳಿ ಮತ್ತು ಕುಂಡಲ ವಸತಿ ಬಸ್ ಸೇವೆ ಪ್ರಾರಂಭಿಸಲು ಭರವಸೆ.
ಸಂಪರ್ಕ ಸೇವೆ: 17 ಬಿಎಸ್‌ಎನ್‌ಎಲ್ ಟವರ್‌ಗಳಿಗೆ ತ್ವರಿತ ಸಂಪರ್ಕ ಕಲ್ಪಿಸುವ ಭರವಸೆ.
ಅರಣ್ಯ ಇಲಾಖೆ ತೊಡಕುಗಳು: ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳ ಭರವಸೆ.
ಕುಣಬಿ ಜನರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾಪ: ಕೇಂದ್ರ ಸರ್ಕಾರದ ನಿರ್ಣಯ ನಿರೀಕ್ಷೆಯಲ್ಲಿದೆ ಎಂದು ತಹಶೀಲದಾರರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಸಂಘದ ಪ್ರಮುಖರಾದ ಯಮುನಾ ಗಾಂವಕರ, ಪ್ರೇಮಾನಂದ ವೇಳಿಪ್, ತಿಲಕ್ ಗೌಡ, ಡಿ.ಸ್ಯಾಮ್ಸನ್ ಮತ್ತು ಹಲವರು ಉಪಸ್ಥಿತರಿದ್ದರು. ಗ್ರಾಮಸ್ಥರು, “ಈ ಬಾರಿ ಭರವಸೆ ಪೂರೈಸದಿದ್ದರೆ ಹೋರಾಟ ಮತ್ತಷ್ಟು ತೀವ್ರವಾಗಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
