Home ನಮ್ಮ ಜಿಲ್ಲೆ ಉಡುಪಿ ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು

ಉಡುಪಿ: ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು

0

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಸೌಜನ್ಯ ಪರ ಹೋರಾಟಗಾರ ಹಾಗೂ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯ ಶರ್ತಬದ್ಧ ಜಾಮೀನು ಮಂಜೂರು ಮಾಡಿದೆ.

ಶನಿವಾರ ಬೆಳಿಗ್ಗೆ ಹಿರಿಯಡ್ಕದ ಜಿಲ್ಲಾ ಕಾರಾಗೃಹದಿಂದ ಬಿಗಿ ಭದ್ರತೆಯಲ್ಲಿ ತಿಮರೋಡಿಯನ್ನು ಕರೆತರಲಾಗಿತ್ತು. ನ್ಯಾಯಾಧೀಶರು ವಿಚಾರಣೆಯನ್ನು ಅಪರಾಹ್ನ 3 ಗಂಟೆಗೆ ಮುಂದೂಡಿದ್ದರು. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ನಾಗೇಶ್ ಎನ್.ಎ. ಅವರು, ತಿಮರೋಡಿ ಅವರು ಮುಂದಿನ ತನಿಖೆ ಮತ್ತು ವಿಚಾರಣೆಗೆ ಸಹಕರಿಸಬೇಕು, ನ್ಯಾಯಾಲಯದ ಅನುಮತಿ ಇಲ್ಲದೆ ಜಿಲ್ಲೆಯ ಹೊರಗೆ ತೆರಳಬಾರದು, ಸಾಕ್ಷಿದಾರರ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ ಎಂಬ ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದ್ದಾರೆ.

ಮಹೇಶ್‌ ಶೆಟ್ಟಿ ತಿಮರೋಡಿ ಅವರು ರಾಜ್ಯದಾದ್ಯಂತ ಸೌಜನ್ಯ ಪರ ಹೋರಾಟದಲ್ಲಿ ಸಕ್ರಿಯರಾಗಿದ್ದು, ಹಲವಾರು ಬಾರಿಯೂ ಆಡಳಿತ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಕಠಿಣವಾಗಿ ನಿಂತಿದ್ದರು. ಇತ್ತೀಚಿನ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದ್ದು, ಕೆಲವು ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದರು.

ಬ್ರಹ್ಮಾವರ ಪೊಲೀಸರು ತಮ್ಮ ಸುಪರ್ದಿಗೊಪ್ಪಿಸುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ಸುಮಾರು 2 ಗಂಟೆಗಳ ಪೊಲೀಸ್ ಕಸ್ಟಡಿ ಬಳಿಕ ಸಂಜೆ 4 ಗಂಟೆಗೆ ಉಡುಪಿ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು ಆರೋಪಿ ಪರ ವಕೀಲ ವಿಜಯ ವಾಸು ಪೂಜಾರಿ ಹಾಗೂ ಸಹಾಯಕ ಸರಕಾರಿ ಅಭಿಯೋಜಕರ ವಾದ- ಪ್ರತಿವಾದ ಆಲಿಸಿದ ನ್ಯಾಯಾಧೀಶ ನಾಗೇಶ್ ಎನ್.ಎ. ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದರು.

ತಿಮರೋಡಿ ಅವರ ಪರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, “ಅವರು ಜನಪರ ಹೋರಾಟಗಾರರು, ಯಾವುದೇ ತಪ್ಪು ಉದ್ದೇಶದಿಂದ ಕಾರ್ಯನಿರ್ವಹಿಸುವವರು ಅಲ್ಲ, ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ” ಎಂದು ವಾದಿಸಿದ್ದರು. ಈ ವಾದಗಳನ್ನು ಪರಿಗಣಿಸಿ, ನ್ಯಾಯಾಲಯವು ಜಾಮೀನು ಅರ್ಜಿಯನ್ನು ಅಂಗೀಕರಿಸಿದೆ.

ಜಾಮೀನು ಮಂಜೂರಾದ ನಂತರ, ಅವರ ಕುಟುಂಬಸ್ಥರು ಹಾಗೂ ಹೋರಾಟಗಾರರ ಬೆಂಬಲಿಗರು ಸಂತೋಷ ವ್ಯಕ್ತಪಡಿಸಿದ್ದು, “ಸತ್ಯಕ್ಕಾಗಿ ಹೋರಾಡಿದವರನ್ನು ಶೀಘ್ರ ಬಿಡುಗಡೆ ಮಾಡುವುದು ನ್ಯಾಯ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ದಿಕ್ಕಿಗೆ ತಿರುಗುತ್ತದೆ ಎಂಬ ಕುತೂಹಲ ಸ್ಥಳೀಯ ಮಟ್ಟದಲ್ಲಿ ಹೆಚ್ಚಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version