ಉಡುಪಿ: ಉಡುಪಿ ರಸ್ತೆ ಸಾರಿಗೆ ಕಚೇರಿಯ (ಆರ್.ಟಿ.ಒ.) ಅಧಿಕಾರಿ ಲಕ್ಷ್ಮೀನಾರಾಯಣ ಪಿ. ನಾಯ್ಕ್ ಮನೆಗೆ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ.
ಲಕ್ಷ್ಮೀನಾರಾಯಣ ಪಿ. ನಾಯ್ಕ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದವರಾಗಿದ್ದು, ಪ್ರಸ್ತುತ ಉಡುಪಿಯಲ್ಲಿ ಆರ್.ಟಿ.ಒ. ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರ ಮನೆ ಮತ್ತು ಸಂಬಂಧಿಕರ ನಿವಾಸಗಳಲ್ಲಿ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಲ್ಲಿನ ಕಿನ್ನಿಮುಲ್ಕಿಯಲ್ಲಿರುವ ಫ್ಲ್ಯಾಟ್‌ನಲ್ಲಿ ಪ್ರಮುಖ ಶೋಧ ಕಾರ್ಯ ನಡೆದಿದೆ. ಅಲ್ಲದೆ, ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮತ್ತು ಉಡುಪಿ ತಾಲೂಕಿನ ಪಡುಅಲೆವೂರು ಗ್ರಾಮದಲ್ಲಿರುವ ಅವರ ಸಂಬಂಧಿಕರ ಮನೆಗಳಲ್ಲೂ ಲೋಕಾಯುಕ್ತ ತಂಡ ಪರಿಶೀಲನೆ ನಡೆಸಿದೆ.
ಲಕ್ಷ್ಮೀನಾರಾಯಣ ನಾಯ್ಕ್ ಆದಾಯ ಮತ್ತು ಆಸ್ತಿ ನಡುವಿನ ಅಸಮತೋಲನದ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆದಿದ್ದು, ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.