Home ನಮ್ಮ ಜಿಲ್ಲೆ ಶಿವಮೊಗ್ಗ ಸಿಗಂದೂರು ಬಿಡ್ಜ್ ಉದ್ಘಾಟನೆ…ಬಿಜೆಪಿ V/S ಕಾಂಗ್ರೆಸ್‌ ರಾಜಕೀಯ

ಸಿಗಂದೂರು ಬಿಡ್ಜ್ ಉದ್ಘಾಟನೆ…ಬಿಜೆಪಿ V/S ಕಾಂಗ್ರೆಸ್‌ ರಾಜಕೀಯ

0

ಶಿವಮೊಗ್ಗ: ಸಿಗಂದೂರು ಬ್ರಿಡ್ಜ್ ಸುಮಾರು 6 ದಶಕಗಳ ಕನಸು. ಸಾಗರ ತಾಲೂಕಿನ ಸಿಗಂದೂರು ಬ್ರಿಡ್ಜ್ ಲೋಕಾರ್ಪಣೆ ರಾಜಕೀಯಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವರು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು, ಸಾಗರ ಶಾಸಕರ ಅನುಪಸ್ಥಿತಿಯಲ್ಲಿಯೇ ಕಾರ್ಯಕ್ರಮ ನಡೆಯಲಿದೆ.

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಅಂಬಾರಗೋಡ್ಲು-ಕಳಸವಳ್ಳಿ (ಸಿಗಂದೂರು) ನಡುವೆ ಶರಾವತಿ ಹಿನ್ನೀರಿನಲ್ಲಿ 473 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸಿಗಂದೂರು ಸೇತುವೆ ಲೋಕಾರ್ಪಣೆ ಕಾರ್ಯಕ್ರಮ ಸೋಮವಾರ ನಡೆಯುತ್ತಿದೆ.

ಆದರೆ ರಾಜ್ಯ ಮಟ್ಟದ ಕಾರ್ಯಕ್ರಮ ರಾಜಕೀಯಗೊಂಡಿದೆ. ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ನಮ್ಮನ್ನು ಆಹ್ವಾನಿಸಿಲ್ಲ ಎಂದು ಹೇಳುತ್ತಿದ್ದಾರೆ. ಕಾರ್ಯಕ್ರಮ ನಿಗದಿಯಂತೆ ನಡೆಯುತ್ತದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರವನ್ನು ಬರೆದು ಉದ್ಘಾಟನಾ ಕಾರ್ಯಕ್ರಮ ಮುಂದೂಡಬೇಕು ಎಂದು ಮನವಿ ಮಾಡಿದ್ದರು. ‘ಸಿಗಂದೂರು ಸೇತುವೆ ಉದ್ಘಾಟನಾ ಸಮಾರಂಭಕ್ಕೆ ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಬೇರೊಂದು ದಿನ ಆಯೋಜಿಸಬೇಕು ಎಂದು’ ಮನವಿ ಸಲ್ಲಿಸಿದ್ದರು.

ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿರುವ ಅಶೋಕ, ‘ತಾನು ಕೊಡ, ಪರರನ್ನು ಕೊಡಲು ಬಿಡ!. ಶರಾವತಿ ಹಿನ್ನೀರು ಭಾಗದ ಜನರ 60 ವರ್ಷಗಳ ಕನಸು ಈಡೇರುತ್ತಿರುವ ಇವತ್ತಿನ ಸಂತೋಷದ ದಿನವನ್ನ ಅಲ್ಲಿನ ಜನಸಾಮಾನ್ಯರು ತಮ್ಮ ಮನೆಯ ಹಬ್ಬದಂತೆ ತೋರಣ ಕಟ್ಟಿ, ಹೂವುಗಳಿಂದ ಅಲಂಕಾರ ಮಾಡಿ ಸಂಭ್ರಮ ಪಡುತ್ತಿದ್ದಾರೆ’ಎಂದು ಹೇಳಿದ್ದಾರೆ.

‘ಆದರೆ ಒಲ್ಲದ ಗಂಡ ಮೊಸರಲ್ಲಿ ಕಲ್ಲು ಹುಡುಕಿದ ಎನ್ನುವಂತೆ ನಾಡಿನ ಮುಖ್ಯಮಂತ್ರಿಗಳಾಗಿ ಇಂತಹ ಐತಿಹಾಸಿಕ ಸುದಿನದಂದು ಅಲ್ಲಿನ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ಬದಲು ಇಲ್ಲಸಲ್ಲದ ಕ್ಯಾತೆ ತೆಗೆದಿದ್ದೀರಲ್ಲ ಸ್ವಾಮಿ, ನಿಮ್ಮ ಭಂಡತನಕ್ಕೆ ಏನು ಹೇಳೋಣ’ ಎಂದು ಪ್ರಶ್ನೆ ಮಾಡಿದ್ದಾರೆ.

’60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಸಾಧ್ಯವಾಗದ್ದನ್ನು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಮಾಡಿ ತೋರಿಸಿತು ಎನ್ನುವ ಹೊಟ್ಟೆ ಉರಿನಾ? ಅಥವಾ ಸೇತುವೆ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ರಾಹುಲ್ ಗಾಂಧಿ ಅವರು ಆದೇಶ ಮಾಡಿದ್ದಾರಾ?’ ಎಂದು ಅಶೋಕ ಪ್ರಶ್ನಿಸಿದ್ದಾರೆ.

‘ಹೈಕಮಾಂಡ್ ನಾಯಕರು ಕರೆದರೆ ಕುರ್ಚಿ ಉಳಿಸಿಕೊಳ್ಳಲು ಎಲ್ಲಾ ಕೆಲಸ ಬಿಟ್ಟು ವಿಶೇಷ ವಿಮಾನದಲ್ಲಿ ದೆಹಲಿಗೆ ಓಡಿ ಹೋಗುತ್ತೀರಿ, ಸಿಗಂದೂರು ಸೇತುವೆ ಉದ್ಘಾಟನೆಗೆ ಹೋಗಲು ಮನಸ್ಸಿಲ್ಲವಾ?. ನಿಮ್ಮಂತಹವರನ್ನು ಮುಖ್ಯಮಂತ್ರಿಗಳಾಗಿ ಪಡೆದ ಕನ್ನಡಿಗರು ನಿಜಕ್ಕೂ ನತದೃಷ್ಟರು’ ಎಂದು ಅಶೋಕ ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ವಿಜಯಪುರ ಪ್ರವಾಸದಲ್ಲಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಬಂದಿಲ್ಲ. ಶಿಷ್ಟಾಚಾರವನ್ನು ಪಾಲನೆ ಮಾಡಬೇಕಲ್ಲ” ಎಂದರು.

‘ಒಂದು ತಿಂಗಳ ಹಿಂದೆಯೇ ವಿಜಯಪುರದ ಕಾರ್ಯಕ್ರಮ ನಿಗದಿಯಾಗಿತ್ತು. ಇಂದಿನ ಕಾರ್ಯಕ್ರಮಕ್ಕೆ ಪ್ರತಿಭಟನಾರ್ಥವಾಗಿ ನಾನು, ಲೋಕೋಪಯೋಗಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಾಗರದ ಶಾಸಕರು ಯಾರೂ ಸಹ ಪಾಲ್ಗೊಳ್ಳುತ್ತಿಲ್ಲ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Exit mobile version