ಬೆಂಗಳೂರು: ಶಕ್ತಿ ಯೋಜನೆಯ ಟಿಕೆಟ್ ಹಣವನ್ನು ಸರ್ಕಾರ ಸೂಕ್ತ ಸಮಯದಲ್ಲಿ ಮರುಪಾವತಿ ಮಾಡದೇ ನಾಲ್ಕು ನಿಗಮಗಳನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅವರು, ನಾಲ್ಕು ನಿಗಮಗಳಲ್ಲಿ ನೂರಾರು ಕೋಟಿ ಬಾಕಿ ಉಳಿದಿದೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸರ್ಕಾರ ಬರೋಬ್ಬರಿ 545 ಕೋಟಿ ರೂ. ಹಣ ಬಾಕಿ ನೀಡಬೇಕಿದ್ದು, ಇದರಿಂದಾಗಿ ಸಿಬ್ಬಂದಿ ಪಿಎಫ್ ಹಣವನ್ನು ಕೂಡಾ ಕಟ್ಟಲಾಗದೆ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದೆ ಎಂದಿದ್ದಾರೆ.
ಇದೀಗ ಸಂಸ್ಥೆಗಳು ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ ಎಂಬ ವಿಚಾರವಾಗಿ ರಾಜ್ಯ ಸರ್ಕಾರದ ಆರ್ಥಿಕ ನೀತಿಯನ್ನು ಅವರು ಖಂಡಿಸಿದ್ದಾರೆ.
“ಸರ್ಕಾರ ಸರಿಯಾಗಿ ಟಿಕೆಟ್ ಹಣವನ್ನು ಮರುಪಾವತಿ ಮಾಡದೇ ಇದ್ದಿದ್ದರಿಂದ ನೂರಾರು ಕೋಟಿ ರೂಪಾಯಿ ಹಣ ನಾಲ್ಕು ನಿಗಮಗಳಿಗೆ ಬಾಕಿ ಉಳದಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಸರ್ಕಾರ ಬರೋಬ್ಬರಿ 545 ಕೋಟಿ ರೂ. ಹಣ ಬಾಕಿ ನೀಡಬೇಕಿದೆ.”
“ಇದರಿಂದ ಸಿಬ್ಬಂದಿ PF ಹಣವನ್ನು ಕೂಡಾ ಕಟ್ಟಲಾಗದೆ ಸಂಸ್ಥೆ ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಸಂಸ್ಥೆಗಳು ಸಾಲ ಪಡೆಯಲು ಸರ್ಕಾರ ಅನುಮತಿ ನೀಡಿದೆ. ವರ್ಷಾನುಗಟ್ಟಲೆ ಸಂಸ್ಥೆಗೆ ದುಡಿದು ನಿವೃತ್ತರಾಗಿರುವ ನೌಕರರಿಗೆ ಸರ್ಕಾರ ಪಿ.ಎಫ್. ಹಣ ಪಾವತಿಸಲೂ ಆಗದ ಆರ್ಥಿಕ ದುಸ್ಥಿತಿಗೆ ಬಂದಿದೆ.”
“ಪಿ.ಎಫ್. ಹಣ ಮಕ್ಕಳ ವಿದ್ಯಾಭ್ಯಾಸ, ಮದುವೆ, ನಿವೃತ್ತಿ ನಂತರ ಜೀವನೋಪಾಯಕ್ಕೆ ಬೇಕಾಗುತ್ತದೆ. ಅತಿ ಹೆಚ್ಚು ಬಜೆಟ್ ಕೊಟ್ಟಿರುವ ಮುಖ್ಯಮಂತ್ರಿಗಳ ರಾಜ್ಯದಲ್ಲಿ ಈ ರೀತಿ ಆಗುತ್ತಿರುವುದು ಇವರ ಆರ್ಥಿಕ ನೀತಿಗಳಿಗೆ, ಉಪಯೋಗವಿಲ್ಲದ ಯೋಜನೆಗಳಿಗೆ ಹಿಡಿದ ಕೈಗನ್ನಡಿ” ಎಂದಿದ್ದಾರೆ.