ಭದ್ರಾವತಿ: ಗಣಪತಿ ವಿಸರ್ಜನೆ ವೇಳೆ ನಡೆದ ಗಲಾಟೆಯನ್ನು ನಿಯಂತ್ರಿಸಲು ಹೋದ ಪೊಲೀಸ್ ಅಧಿಕಾರಿ ಮೇಲೆ ಯುವಕರ ಗುಂಪೊಂದು ಹಲ್ಲೆ ನಡೆಸಿದ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಈ ಘಟನೆ ಭಾನುವಾರ (ಅ. 5) ರಾತ್ರಿ ನಗರದ ಪೇಪರ್ ಟೌನ್ ಪ್ರದೇಶದಲ್ಲಿ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ (ಎಎಸ್ಐ) ಯಲ್ಲಪ್ಪ ಅವರು ಸ್ಥಳಕ್ಕೆ ತೆರಳಿದಾಗ, ಗಲಾಟೆ ಮಾಡುತ್ತಿದ್ದ ಯುವಕರ ಗುಂಪು ಅವರ ತಲೆಯ ಹಿಂಭಾಗಕ್ಕೆ ಮರದ ರೀಪಿನಿಂದ ಹಲ್ಲೆ ನಡೆಸಿದೆ. ಹಲ್ಲೆಯಿಂದ ಯಲ್ಲಪ್ಪ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಈ ಗಲಾಟೆ ಹಳೇ ವೈಷಮ್ಯದಿಂದ ಉಂಟಾಗಿದೆ. ಸುಮಾರು 8 ರಿಂದ 10 ಮಂದಿ ಯುವಕರು ಪರಸ್ಪರ ವಾಗ್ವಾದ ನಡೆಸುತ್ತಿದ್ದರೆಂದು ಹೇಳಲಾಗಿದೆ. ಇದೇ ವೇಳೆ, ಗಲಾಟೆ ಮಧ್ಯೆ ಹತ್ತಿರದಲ್ಲಿದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣೇಗೌಡ ಹಾಗೂ ಅವರ ಪತ್ನಿಯ ಮೇಲೂ ಹಲ್ಲೆ ನಡೆದಿದ್ದು, ಪರಿಸ್ಥಿತಿ ಗೊಂದಲಕರವಾಗಿ ಮಾರ್ಪಟ್ಟಿದೆ.
ಗಲಾಟೆ ನಿಯಂತ್ರಿಸಲು ಮತ್ತು ಶಾಂತಿ ಕಾಪಾಡಲು ಎಎಸ್ಐ ಯಲ್ಲಪ್ಪ ಸ್ಥಳಕ್ಕೆ ಧಾವಿಸಿದಾಗ, ಅವರ ಮೇಲೆ ಹಿಂದಿನಿಂದ ಬಂದು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅಧಿಕಾರಿಗೆ ಮೊದಲು ಭದ್ರಾವತಿ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಈ ಕುರಿತು ಭದ್ರಾವತಿ ಪೇಪರ್ ಟೌನ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪೊಲೀಸ್ ವಲಯದಲ್ಲಿ ಈ ಘಟನೆ ಆತಂಕ ಮೂಡಿಸಿದ್ದು, ಅಧಿಕಾರಿಗಳ ವಿರುದ್ಧ ಹಲ್ಲೆ ನಡೆಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹ ವ್ಯಕ್ತಪಡಿಸಿದ್ದಾರೆ.