Home ನಮ್ಮ ಜಿಲ್ಲೆ ರಸ್ತೆ ಗುಂಡಿ ಮುಚ್ಚಿದ ಗ್ರಾಮಸ್ಥರು: ಸರ್ಕಾರದ ಬಳಿ ಒಂದು ಬುಟ್ಟಿ ಮಣ್ಣಿಗೂ ದುಡ್ಡಿಲ್ಲವೇ?

ರಸ್ತೆ ಗುಂಡಿ ಮುಚ್ಚಿದ ಗ್ರಾಮಸ್ಥರು: ಸರ್ಕಾರದ ಬಳಿ ಒಂದು ಬುಟ್ಟಿ ಮಣ್ಣಿಗೂ ದುಡ್ಡಿಲ್ಲವೇ?

0

ಬೀದರ್: ಬೀದರ್‌ ಜಿಲ್ಲೆಯ ಕಂದಗೋಳ ಗ್ರಾಮಸ್ಥರೇ ತಮ್ಮ ತಮ್ಮ ಕೈಯಿಂದ ಹಣ ಹಾಕಿಕೊಂಡು ರಸ್ತೆ ರಿಪೇರಿ ಮಾಡಿದ್ದು, ಸ್ವಂತ ಖರ್ಚಿನಲ್ಲೇ ಜಲ್ಲಿ, ಮರಳು ತಂದು ರಸ್ತೆಯಲ್ಲಿ ಬಿದ್ದ ಗುಂಡಿಗಳನ್ನು ಮುಚ್ಚಿದ್ದಾರೆ. ಈ ಕುರಿತಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ “ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನಾಲಾಯಕ್ ಕಾಂಗ್ರೆಸ್ ಸರ್ಕಾರದ ಮೇಲೆ ಕರ್ನಾಟಕದ ಜನತೆ ಸಂಪೂರ್ಣವಾಗಿ ನಂಬಿಕೆ ಕಳೆದುಕೊಂಡಿದ್ದು, ಬೀದರ್ ಜಿಲ್ಲೆಯ ಕಂದಗೋಳ ಗ್ರಾಮಸ್ಥರು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಮುಂದಾಗಿರುವುದೇ ಇದಕ್ಕೆ ಸಾಕ್ಷಿ.

ರಸ್ತೆಯಲ್ಲಿ ದಿನನಿತ್ಯ ಓಡಾಡುವ ಗ್ರಾಮಸ್ಥರು ಬೈಕಿನಿಂದ ಬಿದ್ದು ಗಾಯಗೊಳ್ಳುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಸಾಕಷ್ಟು ಬಾರಿ ಮನವಿ ಮಾಡಿ ರಿಪೇರಿ ಮಾಡುವಂತೆ ಕೇಳಿಕೊಂಡಿದ್ದರೂ ಪ್ರಯೋಜನವಾಗದ ಮೇಲೆ ಕೊನೆಗೆ ಗ್ರಾಮಸ್ಥರೇ ಹಣ ಸಂಗ್ರಹಿಸಿ ಜಲ್ಲಿ ಕಲ್ಲು, ಮರಳು ತರಿಸಿ ರಸ್ತೆ ಗುಂಡಿ ಮುಚ್ಚಿದ್ದಾರೆ ಇದು ಎಂತಹ ವಿಪರ್ಯಾಸ ಎಂದು ಕೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ಖರ್ಗೆ ಅವರೇ, ಸರ್ಕಾರದ ಬಳಿ ಹಾಳಾಗಿರುವ ರಸ್ತೆಗೆ ಒಂದು ಬುಟ್ಟಿ ಮಣ್ಣು ಹಾಕಲೂ ದುಡ್ಡಿಲ್ಲ ಎಂದು ನಿಮ್ಮ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದ ಮಾತು ನಿಜ ಅಂತ ಸಾಬೀತು ಮಾಡಿ ಬಿಟ್ಟಿರಿ. ದೇಶ, ವಿದೇಶಗಳ ಇರೋಬರೋ ಎಲ್ಲ ವಿಷಯಗಳ ಬಗ್ಗೆ ಮೂಗು ತೂರಿಸಿ ಉಪದೇಶ ಮಾಡುವ ತಮಗೆ ತಮ್ಮ ಪಕ್ಕದ ಬೀದರ್ ಜಿಲ್ಲೆಯ ಈ ದುಸ್ಥಿತಿ ಕಾಣುತ್ತಿಲ್ಲವೇ ಸ್ವಾಮಿ? ಎಂದು ಸಚಿವ ಪ್ರಿಯಾಂಕ್‌ ಖರ್ಗೆಯನ್ನು ಅಶೋಕ ಪ್ರಶ್ನೆ ಮಾಡಿದ್ದಾರೆ.

ಜನರು ತಾವೇ ಹಣ ಸಂಗ್ರಹಿಸಿ ರಸ್ತೆ ಗುಂಡಿ ಮುಚ್ಚುವುದಾದರೆ ನಿಮ್ಮ ಸರ್ಕಾರ ಇದ್ದರೆಷ್ಟು, ಬಿದ್ದರೆಷ್ಟು? ನಾಚಿಕೆಯಾಗಬೇಕು ಈ ನಾಲಾಯಕ್ ಕಾಂಗ್ರೆಸ್ ಸರ್ಕಾರಕ್ಕೆ ಎಂದು ಪೋಸ್ಟ್ ಹಾಕಿದ್ದಾರೆ. ಆರ್. ಅಶೋಕ.

ಬೀದರ್‌ ಜಿಲ್ಲೆಯ ಕಂದಗೋಳ ಗ್ರಾಮಸ್ಥರು ಸಾಕಷ್ಟು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳ ಬಳಿ ಮನವಿ ಮಾಡಿ ರಿಪೇರಿ ಮಾಡುವಂತೆ ಕೇಳಿಕೊಂಡರೂ ರಸ್ತೆ ರಿಪೇರಿಯಾಗಲಿಲ್ಲ. ಆದ್ದರಿಂದ ಕೊನೆಗೆ ಗ್ರಾಮಸ್ಥರಿಂದ ಹಣವನ್ನು ಸಂಗ್ರಹ ಮಾಡಿ 3 ಕಿ. ಮೀ. ರಸ್ತೆಯಲ್ಲಿದ್ದ ಗುಂಡಿ ಮುಚ್ಚಿದ್ದಾರೆ. ಈ ಕುರಿತು ವರದಿಗಳು ಇಂದು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

NO COMMENTS

LEAVE A REPLY

Please enter your comment!
Please enter your name here

Exit mobile version