Home ನಮ್ಮ ಜಿಲ್ಲೆ ಮೈಸೂರು ಮೈಸೂರು: ಬಾನು ಮುಷ್ತಾಕ್ ಕನ್ನಡಾಂಬೆ ಹೇಳಿಕೆ ಬಗ್ಗೆ ನಮ್ಮ ತಕರಾರು

ಮೈಸೂರು: ಬಾನು ಮುಷ್ತಾಕ್ ಕನ್ನಡಾಂಬೆ ಹೇಳಿಕೆ ಬಗ್ಗೆ ನಮ್ಮ ತಕರಾರು

0

ಮೈಸೂರು: ಬಾನು ಮುಷ್ತಾಕ್ ಅವರ ಬಗ್ಗೆ ತಮಗೆ ಗೌರವವಿದೆ. ಆದರೆ ದಸರಾ ಶೇ. 100 ರಷ್ಟು ಧಾರ್ಮಿಕ ಆಚರಣೆ. ಹೀಗಾಗಿ ನಮ್ಮ ಧಾರ್ಮಿಕ ಆಚರಣೆ ಬಗ್ಗೆ ಬಾನು ಮುಷ್ತಾಕ್ ಅವರಿಗೆ ಅಸಮಾಧಾನವಿರುವ ಕಾರಣ ದಸರಾ ಉದ್ಘಾಟನೆಗೆ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸುತ್ತಿರುವುದಾಗಿ ಮಾಜಿ ಸಂಸದ ಪ್ರತಾಪ್‌ಸಿಂಹ ಸ್ಪಷ್ಟ ಪಡಿಸಿದರು.

ಅವರ ಆಯ್ಕೆ ಪ್ರಶ್ನಿಸಿ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಬಗ್ಗೆ ನಗರದಲ್ಲಿ ಸುದ್ದಿಗಾರರೊಡನೆ ಪ್ರತಿಕ್ರಿಯಿಸಿ, ಅವರು ಮುಸ್ಲಿಂ ಎನ್ನುವ ಕಾರಣಕ್ಕೆ ನನ್ನ ವಿರೋಧವಿಲ್ಲ. ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಹೇಳಿಕೆ ಬಗ್ಗೆ ನಮ್ಮ ತಕರಾರು ಇದೆ. ಹಿಂದೂ ಸಂಸ್ಕಾರಗಳ ಬಗ್ಗೆ ಬಾನು ಮುಷ್ತಾಕ್‌ಗೆ ಒಪ್ಪಿಗೆ ಇಲ್ಲ. ಕನ್ನಡಾಂಬೆ ಬಗ್ಗೆ ಬಾನು ಮುಷ್ತಾಕ್ ಹೇಳಿರುವ ಬಗ್ಗೆ ಏಕೆ ಸಿಎಂ ಮಾತಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಕನ್ನಡಾಂಬೆಯ ಅರಿಶಿನ ಕುಂಕುಮ ಬಗ್ಗೆ ಆಡಿರುವ ಮಾತಿನ ಬಗ್ಗೆ ಬಾನು ಮುಷ್ತಾಕ್ ಕ್ಷಮೆ ಕೇಳಿದ್ದರೆ ನಾನು ಕೋರ್ಟ್‌ಗೆ ಹೋಗುತ್ತಿರಲಿಲ್ಲ. ಕ್ಷಮೆಯೆ ಕೇಳದವರು ಚಾಮುಂಡಿ ದೇವಿಗೆ ಗೌರವ ಕೊಡುತ್ತಾರೆಂದು ಹೇಗೆ ನಂಬುವುದು. ತಾವು ಆಡಿರುವ ಮಾತಿಗೆ ಸ್ಪಷ್ಟೀಕರಣ ಕೊಡಲಿಲ್ಲ. ಭುವನೇಶ್ವರಿ ಬಗ್ಗೆ ಹೇಳಿರುವ ಹೇಳಿಕೆ ಬಗ್ಗೆ ಯಾಕೆ ಬಾನು ಮುಷ್ತಾಕ್ ಮಾತಾಡುತ್ತಿಲ್ಲ. ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗುತ್ತದೆ ಎಂದು ಕಾನೂನಾತ್ಮಕವಾಗಿಯೆ ಹೋರಾಟಕ್ಕೆ ಇಳಿದಿದ್ದೇನೆ ಎಂದರು.

ಮುಸ್ಲಿಂಮರು ಶಾಂತಿಪ್ರಿಯರು ಎಂದು ಸಿಎಂ ಮೊನ್ನೆ ಹೇಳಿದ್ದಾರೆ. ಮಂಡ್ಯದಲ್ಲಿ ಗಣೇಶ ಮೂರ್ತಿ ಮೇಲೆ ಕಲ್ಲು ಎಸೆದಿದ್ದು ಯಾರು ಸಿದ್ದರಾಮಯ್ಯ ಅವರೇ ಎಂದು ನೇರವಾಗಿ ಪ್ರಶ್ನಿಸಿದರು. ಹಿಂದೂಗಳಷ್ಟು ಜಾತ್ಯಾತೀತರು ಮತ್ತೊಬ್ಬರು ಇಲ್ಲ. ಸಿಎಂ ಹಿಂದೂಗಳಿಗೆ ಜಾತ್ಯಾತೀತ ಪಾಠ ಮಾಡಬೇಡಿ. ನಮ್ಮ ಸಂಸ್ಕೃತಿ ಬಗ್ಗೆ ಅಸಡ್ಡೆ ಮಾತಾಡುವ ಬಾನು ಮುಷ್ತಾಕ್ ಅವರು ನಮ್ಮ ಕಣ್ಣಿಗೆ ಘಜ್ನಿ, ಮೊಘಲರ ರೀತಿ ಕಾಣಿಸಿ ಕೊಳ್ಳುತ್ತಾರೆ. ಸಿಎಂ ಮುಸ್ಲಿಂಮರಿಗೆ ಉತ್ತೇಜನ ಕೊಡುತ್ತಿದ್ದಾರೆ. ಮುಸ್ಲಿಂರು ಶಾಂತಿ ಪ್ರಿಯರು ಎಂದ ಕ್ಷಣ ಮುಸ್ಲಿಂ ಇಲ್ಲಿ ಕಲ್ಲು ಎಸೆದಿದ್ದಾರೆ. ಸಿಎಂ – ಡಿಸಿಎಂ ಇಬ್ಬರಿಗೆ ಕೈ ಮುಗಿದು ಕೇಳುತ್ತೇನೆ. ಬಾನು ಮುಷ್ತಾಕ್ ಭಾಷಣ ಒಪ್ಪುತ್ತೀರಾ ಹೇಳಿ? ಒಪ್ಪುವುದಾದರೆ ಧೈರ್ಯವಾಗಿ ಹೇಳಲಿ ಎಂದು ಸವಾಲೆಸೆದರು.

ಸಿಎಂ – ಡಿಸಿಎಂ ಇಬ್ಬರೂ ಸೇರಿ ಬಾನು ಮುಷ್ತಾಕ್‌ರಿಂದ ಕನ್ನಡಿಗರಿಗೆ ಕ್ಷಮೆ ಕೇಳಿಸಲಿ ನಾನು ಈಗಲೂ ಕೇಸ್ ವಾಪಸ್ ಪಡೆಯುತ್ತೇನೆ. ಪ್ರಕರಣ ನಿಭಾಯಿಸುವುದರಲ್ಲಿ ಸಿಎಂ ಬಹಳ ಚಾಣಾಕ್ಷರು. ಮುಡಾ ಕೇಸ್‌ನಲ್ಲೇ ಅದನ್ನು ನಾವು ನೋಡಿದ್ದೇವೆ. ನಮಗೆ ಕೇಸ್ ಬಗ್ಗೆ ಹೇಳಿ ಕೊಡುವುದಕ್ಕೆ ಬರಬೇಡಿ ಎಂದರು.

ಮಂಡ್ಯ ಘಟನೆ ಕುರಿತು, ಇದು ಕನ್ನಡಿಗರ ಸರಕಾರ ಅಲ್ಲ. ಇದು ತಾಲಿಬಾನಿ ಸರಕಾರ. ಕಾಂಗ್ರೆಸ್ ಸರಕಾರ ಬಂದ ಕೂಡಲೇ ಕೆಲ ಸಂಘಟನೆಯವರು ಎದ್ದು ಕುಳಿತು ಕೊಳ್ಳುತ್ತಾರೆ. ಡಿಜೆ ಹಳ್ಳಿ – ಕೆಜೆ ಹಳ್ಳಿ ಕೇಸ್ ವಾಪಾಸ್ ಪಡೆದಿದ್ದಕ್ಕೆ ಮತ್ತೆ ಪುಂಡಾಟಿಕೆ ಶುರು ಮಾಡಿದ್ದಾರೆ. ಹಿಂದೂಗಳು ಶಾಂತಿಯಿಂದ ಗಣೇಶ ಮೆರವಣಿಗೆ ಮಾಡಲು ಅಸಾಧ್ಯವಾದ ವಾತಾವರಣ ನಿರ್ಮಾಣ ಆಗುತ್ತಿದೆ. ಮುಸ್ಲಿಂಮರು ಶಾಂತಿ ಪ್ರಿಯರು ಎಂದು ಸಿಎಂ ಹೇಳಿದ್ದಾರೆ. ನಿನ್ನೆ ಗಣೇಶ ಮೂರ್ತಿ ಮೇಲೆ ಕಲ್ಲು ಹೊಡೆದಿದ್ದು ಯಾರು? ಗಣೇಶೋತ್ಸವದ ಮೇಲೆ ಕಲ್ಲು ಹೊಡೆಯುವುದೇ ಇವರ ಸಂಸ್ಕೃತಿಯೇನು ಎಂದು ಖಾರವಾಗಿ ಪ್ರಶ್ನಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version