ಮೈಸೂರು ನಗರದ ನಿವಾಸಿಗಳಾದ ಚಂದನ್ ಮತ್ತು ಲಾವಣ್ಯ ಸರಳವಾಗಿ ವಿವಾಹವಾದರು. ಈ ವೇಳೆ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕುವ ಮೂಲಕ ಎಲ್ಲರಿಗೂ ಮಾದರಿಯೂ ಆದರು.
ಮಾಂಗಲ್ಯ ಧಾರಣೆ ಬಳಿಕ ನವ ದಂಪತಿ ಸ್ವ-ಇಚ್ಛೆಯಿಂದಲೇ ಮೈಸೂರಿನ ಅಗ್ರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರ ಸಮ್ಮುಖದಲ್ಲಿ ದೇವಸ್ಥಾನದಲ್ಲೇ ನೇತ್ರದಾನ ಪ್ರಕ್ರಿಯೆಗೆ ಸಹಿ ಹಾಕಿದರು. ಈ ರೀತಿ ಇವರು ಮುಂದಿನ ಪೀಳಿಗೆಯ ನಾಲ್ಕು ಮಂದಿಗೆ, ನಾಲ್ಕು ಕುಟುಂಬಗಳಿಗೆ ಬೆಳಕಾಗುವ ಹಾದಿಯನ್ನು ಬರೆದು ಇವರು ಸಮಾಜಕ್ಕೆ ಆದರ್ಶಪ್ರಾಯರೆನಿಸಿದರು.
ವರ ಚಂದನ್ ಮಾತನಾಡಿ, “ಇಂದಿನ ಯುವಕರಿಗೆ ಮದುವೆ ಎಂದರೆ ಹಳದಿ, ಸಂಗೀತ್, ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅಷ್ಟೆ. ನಾವು ಸಹ ಹಾಗೆ ಅಂದುಕೊಂಡಿದ್ದೆವು. ಆದರೆ ಮದುವೆಯ ಕ್ಷಣ ಸಮಾಜಕ್ಕೆ ಕೊಡುಗೆಯಾಗಿ ನೆನಪಾಗಲಿ ಎಂದುಕೊಂಡೆವು” ಎಂದರು.
“ಡಾ. ರಾಜ್ ಕುಮಾರ್ ಅವರ ದಾರಿಯನ್ನು ಅನುಸರಿಸಿ, ‘ನೇತ್ರದಾನ ಮಹಾದಾನ’ ಎಂಬ ಮಾತಿನಂತೆ ನಾವು ಈ ಕಾರ್ಯಕ್ಕೆ ಮುಂದಾದೆವು. ಇದರಿಂದ ಮನಸ್ಸಿಗೆ ನಿಜವಾದ ಆತ್ಮತೃಪ್ತಿ ದೊರಕಿದೆ” ಎಂದರು. ವಧು ಲಾವಣ್ಯ ಸಹಾ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.