Home ನಮ್ಮ ಜಿಲ್ಲೆ Vande Bharat: ಮೈಸೂರು-ತಿರುಪತಿ ನಡುವೆ ವಂದೇ ಭಾರತ್ ರೈಲು

Vande Bharat: ಮೈಸೂರು-ತಿರುಪತಿ ನಡುವೆ ವಂದೇ ಭಾರತ್ ರೈಲು

0

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಿಂದ ತಿರುಪತಿ ತಿರುಮಲ ದೇವಾಲಯಕ್ಕೆ ತೆರಳುವ ಭಕ್ತರಿಗೆ ಸಿಹಿಸುದ್ದಿ ಇದೆ. ಭಕ್ತರ ಅನುಕೂಲಕ್ಕಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭವಾಗಲಿದೆ. ಈ ಮೂಲಕ ಮೈಸೂರು ನಗರಕ್ಕೆ ಮತ್ತೊಂದು ವಂದೇ ಭಾರತ್ ರೈಲು ಸಿಗಲಿದೆ.

ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿ ಮಾಡಿದರು. ಕ್ಷೇತ್ರದ ವಿವಿಧ ರೈಲು ಯೋಜನೆಗಳ ಕುರಿತು ಮಾತುಕತೆ ನಡೆಸಿದರು.

ಈ ಭೇಟಿ ಸಮಯದಲ್ಲಿಯೇ ಮೈಸೂರು-ತಿರುಪತಿ ವಂದೇ ಭಾರತ್ ರೈಲು ಸೇವೆಗಾಗಿ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ ಬೆಂಗಳೂರು-ತಿರುಪತಿ ನಡುವೆ ವಂದೇ ಭಾರತ್ ರೈಲು ಸೇವೆ ಇದೆ. ಇದನ್ನು ಮೈಸೂರು ನಗರದ ತನಕ ವಿಸ್ತರಣೆ ಮಾಡಬೇಕು ಎಂದು ಬೇಡಿಕೆ ಇಡಲಾಗಿದೆ.

ಈ ಕುರಿತು ಸಂಸದರು ಪೋಸ್ಟ್ ಹಾಕಿದ್ದು, ‘ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ತಿರುಪತಿಗೆ ನಿಯಮಿತವಾಗಿ ಪ್ರಯಾಣಿಸುವುದರಿಂದ ಬೆಂಗಳೂರು-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಮೈಸೂರಿನವರೆಗೆ ವಿಸ್ತರಿಸಬೇಕೆಂದು ನಾನು ವಿನಂತಿಸಿದೆ’ ಎಂದು ಹೇಳಿದ್ದಾರೆ.

‘ಮಾನ್ಯ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಮತ್ತು ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು’ ಎಂದು ಸಂಸದರು ತಿಳಿಸಿದ್ದಾರೆ.

ರೈಲಿನ ವೇಳಾಪಟ್ಟಿ: ಬೆಂಗಳೂರು-ವಿಜಯವಾಡ ನಡುವೆ ಈಗಾಗಲೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಪರ್ಕವಿದೆ. ಟೆಕ್ಕಿಗಳಿಗೆ ಮತ್ತು ತಿರುಪತಿಗೆ ತೆರಳುವ ಭಕ್ತರಿಗೆ ಈ ರೈಲು ಸಹಾಯಕವಾಗಿದೆ. ಇದನ್ನು ಮೈಸೂರು ತನಕ ವಿಸ್ತರಣೆ ಮಾಡಬೇಕು ಎಂಬುದು ಬೇಡಿಕೆಯಾಗಿದೆ.

ವಿಜಯವಾಡ ಹೊರಡುವ ವಂದೇ ಭಾರತ್ ರೈಲು ತೆನಾಲಿ, ಒಂಗೋಲ್, ನೆಲ್ಲೂರು, ತಿರುಪತಿ, ಚಿತ್ತೂರು, ಕಟಪಾಡಿ, ಜೋಲಾರಪೇಟೆ, ಕೆ.ಆರ್.ಪುರ ಮೂಲಕ ಬೆಂಗಳೂರು ತಲುಪಲಿದೆ.

ಈ ರೈಲಿಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು, ಕೆ.ಆರ್.ಪುರ, ಕಟಪಾಡಿ, ಚಿತ್ತೂರು, ತಿರುಪತಿ, ನೆಲ್ಲೂರು, ಒಂಗೋಲ್, ತೆನಾಲಿ, ವಿಜಯವಾಡದಲ್ಲಿ ನಿಲುಗಡೆ ಇದೆ.

ವಾರದಲ್ಲಿ 6 ದಿನ ಸಂಚಾರ ನಡೆಸುವ ರೈಲು ವಿಜಯವಾಡದಿಂದ ಬೆಳಗ್ಗೆ 5:15ಕ್ಕೆ ಹೊರಟು ಮಧ್ಯಾಹ್ನ 2:15ಕ್ಕೆ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 2:45ಕ್ಕೆ ಹೊರಟು ರಾತ್ರಿ 11:45ಕ್ಕೆ ವಿಜಯವಾಡ ತಲುಪಲಿದೆ.

ಬೆಂಗಳೂರು-ವಿಜಯವಾಡ ನಡುವಿನ ಈ ರೈಲು ತಿರುಪತಿ ಮೂಲಕ ಸಾಗುವುದರಿಂದ ಬೆಂಗಳೂರು-ತಿರುಪತಿ ನಡುವಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ರೈಲನ್ನು ಈಗ ಮೈಸೂರು ತನಕ ವಿಸ್ತರಣೆ ಮಾಡಬೇಕು ಎಂದು ಯದುವೀರ್ ಒಡೆಯರ್ ಬೇಡಿಕೆ ಇಟ್ಟಿದ್ದಾರೆ.

ಸಂಸದರು ಸಚಿವರ ಭೇಟಿ ಸಮಯದಲ್ಲಿ ಮೈಸೂರು-ಚಾಮರಾಜನಗರ ರೈಲು ಮಾರ್ಗದ ವಿದ್ಯುದೀಕರಣವನ್ನು ತ್ವರಿತಗೊಳಿಸಲು ನೀಡಿದ ಬೆಂಬಲಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ಮೈಸೂರು ಮತ್ತು ರಾಮೇಶ್ವರಂ ನಡುವೆ ನೇರ ರೈಲು ಸೇವೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಸಚಿವರ ಗಮನಕ್ಕೆ ತಂದಿದ್ದಾರೆ. ಸಚಿವರು ಇದರ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿ ಸೇವೆಯನ್ನು ಅನುಷ್ಠಾನಗೊಳಿಸುವತ್ತ ಕೆಲಸ ಮಾಡುವುದಾಗಿ ಭರವಸೆ ನೀಡಿದರು ಎಂದು ಸಂಸದರು ಹೇಳಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version