ಮಂಡ್ಯ: ಮೂರುವರೆ ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಿಗೆ ಮಂಡ್ಯ 2ನೇ ಜಿಲ್ಲಾ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಶಿವಣ್ಣ ಬಿನ್ ಲೇಟ್ ಚಿಕ್ಕಣ್ಣ (59) ಎಂಬಾತ ಜೀವಾವಧಿ ಶಿಕ್ಷೆಗೆ ಗುರಿಯಾದವನು.
ಏನಿದು ಘಟನೆ ?
ಡಿಸೆಂಬರ್ 11, 2023ರಂದು ಮಧ್ಯಾಹ್ನ ಸುಮಾರು 12 ಗಂಟೆ ಸಮಯದಲ್ಲಿ ತನ್ನ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಆರೋಪಿ ಪುಸಲಾಯಿಸಿಕೊಂಡು ಪಕ್ಕದಲ್ಲೇ ಇರುವ ತನ್ನ ಮನೆಗೆ ಕರೆದುಕೊಂಡು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಅಲ್ಲದೇ ಘಟನೆಗೆ ಸಂಬಂಧಿಸಿದಂತೆ ಅಮ್ಮನಿಗೆ ಹೇಳಬಾರದೆಂದು ಬೆದರಿಕೆ ಹಾಕಿದ್ದ.
ನಂತರ ಮಗುವಿನ ತಾಯಿ ನೀಡಿದ ದೂರಿನ ಮೇರೆಗೆ ಕೆ.ಆರ್. ಸಾಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯಿದೆ 2012ರ ಅಡಿಯಲ್ಲಿ ದೂರು ದಾಖಲಾಗಿತ್ತು. ಈ ಹಿಂದೆ ಕೆ.ಆರ್. ಸಾಗರ ವೃತ್ತ ನಿರೀಕ್ಷಕರಾಗಿದ್ದ ಪುನೀತ್ ಟಿ.ಎಂ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ದಿಲೀಪ್ ಕುಮಾರ್ ಅವರು ಇಂದು ಆರೋಪಿಗೆ ಜೀವಿತಾವಧಿ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಅವರು ಸಂತ್ರಸ್ತರ ಪರ ವಾದ ಮಂಡಿಸಿದ್ದರು.