ಬೆಂಗಳೂರು ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ)ಯೊಂದು ಸ್ಥಳಾಂತರವಾಗಿದೆ. ನಿಮ್ಮ ವಾಹನದ ನೋಂದಣಿ ಸಂಖ್ಯೆ ಕೆಎ 05 ಆಗಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಇದುವರೆಗೂ ಬೆಂಗಳೂರು ನಗರದ ಕೇಂದ್ರ ಭಾಗದಲ್ಲಿದ್ದ ಆರ್‌ಟಿಒ ಕಚೇರಿಗಾಗಿ ಇನ್ನು ಮುಂದೆ ಬಹಳ ದೂರ ಸಾಗಬೇಕಿದೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಶನಿವಾರ ಸಾರಿಗೆ ಇಲಾಖೆ ಬೆಂಗಳೂರು ದಕ್ಷಿಣ ಕಛೇರಿಯ ನೂತನ ಕಟ್ಟಡದ ಉದ್ಘಾಟನೆಯನ್ನು ಮಾಡಿದ್ದಾರೆ. ಹೊಸ ಕಟ್ಟಡ ಅಂಜನಾಪುರದಲ್ಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಶಾಸಕ ಕೃಷ್ಣಪ್ಪ, ಇಲಾಖೆಯ ಅಧಿಕಾರಿಗಳಾದ ಮಲ್ಲಿಕಾರ್ಜುನ್, ಉಮಾ ಶಂಕರ್ ಬಿ.ಪಿ., ಜ್ಞಾನೇಂದ್ರ ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ಜಯನಗರ ಆರ್‌ಟಿಒ ಕಚೇರಿ: ಕೆಎ 05 ಬೆಂಗಳೂರು ದಕ್ಷಿಣ (ಜಯನಗರ)ದ ಪ್ರಾದೇಶಿಕ ಸಾರಿಗೆ ಕಚೇರಿ. ಜಯನಗರದ 4ನೇ ಬ್ಲಾಕ್ ಬಿಎಂಟಿಸಿ ಬಸ್ ನಿಲ್ದಾಣದ ಮೇಲಿದ್ದ ಕಚೇರಿ ಇನ್ನು ಮುಂದೆ ಅಂಜನಾಪುರದಲ್ಲಿ ಕಾರ್ಯ ನಿರ್ವಹಣೆ ಮಾಡಲಿದೆ. ಅಂಜಾನಪುರ ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ಪ್ರದೇಶವಾಗಿದೆ.
ಸ್ವಂತವಾದ ನೂತನ ಕಟ್ಟಡಕ್ಕೆ ಹೊಸ ಆರ್‌ಟಿಒ ಕಚೇರಿ ಸ್ಥಳಾಂತರಗೊಳ್ಳುತ್ತಿದ್ದು, ಹೊಸ ಕಟ್ಟಡ ಶನಿವಾರ ಲೋಕಾರ್ಪಣೆಯಾಗಿದೆ. ಮೂರು ಅಂತಸ್ತಿನ ಈ ಕಟ್ಟಡ 38,793 ಚದರಡಿ ವಿಸ್ತೀರ್ಣವನ್ನು ಹೊಂದಿದೆ. 11.25 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ.
1981ರಲ್ಲಿ ಬೆಂಗಳೂರು ದಕ್ಷಿಣ (ಕೆಎ 05) ಆರ್‌ಟಿಒ ಕಚೇರಿ ಸ್ಥಾಪನೆ ಮಾಡಲಾಯಿತು. 2011ರಿಂದ ಕಚೇರಿಯನ್ನು ಬೆಂಗಳೂರು 4ನೇ ಬ್ಲಾಕ್‌ನ ಬಿಎಂಟಿಸಿ ಬಸ್ ನಿಲ್ದಾಣದ ಮೇಲಿನ ಕಚೇರಿಗೆ ಸ್ಥಳಾಂತರ ಮಾಡಲಾಗಿತ್ತು. ಈಗ ಸಾರಿಗೆ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಮಾಡಿದ್ದು, ಅಲ್ಲಿಗೆ ಕಚೇರಿ ಸ್ಥಳಾಂತರ ಮಾಡಲಾಗಿದೆ.
ಅಂಜನಾಪುರದಲ್ಲಿ ನಿರ್ಮಾಣ ಮಾಡಿರುವ ಕಚೇರಿಗೆ ದಾಖಲೆಗಳ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಮುಂದಿನ ಒಂದು ತಿಂಗಳಿನಲ್ಲಿ ಜಯನಗರದ ಕಚೇರಿ ಸಂಪೂರ್ಣವಾಗಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಲಿದೆ.
ಇನ್ನು ಮುಂದೆ ಕೆಎ 05 ಕಚೇರಿಯಲ್ಲಿ ಯಾವುದೇ ಕೆಲಸವಿದ್ದರೆ ಅಂಜನಾಪುರಕ್ಕೆ ಜನರು ಹೋಗಬೇಕಿದೆ. ಜಯನಗರ 4ನೇ ಬ್ಲಾಕ್ ಜನರಿಗೆ ಬಂದು ಹೋಗಲು ಅನುಕೂಲವಾಗಿತ್ತು. ಆದರೆ ಈಗ ಅಂಜನಾಪುರ ತನಕ ಹೋಗಿ ಬರಬೇಕಿದೆ.
ಸಾರಿಗೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಬೆಂಗಳೂರು ದಕ್ಷಿಣ (ಕೆಎ 05) ಕಚೇರಿಯಲ್ಲಿ ಇದುವರೆಗೂ ನೋಂದಣಿಯಾದ ಒಟ್ಟು ವಾಹನಗಳು 18,54,982. ಈ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ 70 ವಾಹನ ತರಬೇತಿ ಶಾಲೆ, 36 ವಾಯು ಮಾಲಿನ್ಯ ತಪಾಸಣಾ ಕೇಂದ್ರಗಳಿವೆ.
ಬೆಂಗಳೂರು ನಗರದಲ್ಲಿ ಮೊದಲು 5 ಆರ್‌ಟಿಒ ಕಚೇರಿಗಳಿದ್ದವು. ಬೆಂಗಳೂರು ನಗರ ಉದ್ದಗಲಕ್ಕೆ ಬೆಳೆದಂತೆ ಆರ್‌ಟಿಒ ಕಚೇರಿಗಳ ಸಂಖ್ಯೆಯೂ ಅಧಿಕವಾಯಿತು. ಈಗ ನಗರದಲ್ಲಿ 17 ಆರ್‌ಟಿಒ ಕಚೇರಿಗಳಿವೆ. ಕೆಎ 01 ರಿಂದ ಆರಂಭವಾದರೆ ಕೆಎ 61 ತನಕದ ನೋಂದಣಿ ಸಂಖ್ಯೆ ಹೊಂದಿರುವ ಕಚೇರಿಗಳು ಬೆಂಗಳೂರು ನಗರಕ್ಕೆ ಸೇರಿವೆ.