ಮಂಡ್ಯ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಜ್ಯುವೆಲ್ಲರಿ ಶಾಪ್ ಕಳ್ಳತನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಾಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ.
ಆಗಸ್ಟ್ 17ರಂದು ಮುಂಜಾನೆ 3 ಗಂಟೆ ಸಮಯದಲ್ಲಿ ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವೆಲ್ಲರಿ ಶಾಪ್‌ನ ಬಾಗಿಲನ್ನು ಗ್ಯಾಸ್ ಕಟರ್ ಬಳಸಿ ಶೆಟರ್ ಮುರಿದು ದರೋಡೆ ಮಾಡಲಾಗಿತ್ತು. 110 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿಯನ್ನು ಐವರ ತಂಡ ಕದ್ದು ಪರಾರಿಯಾಗಿತ್ತು.
ಚಿನ್ನದಂಗಡಿ ಕಳ್ಳತನ ಮಾಡುವುದನ್ನು ಕಂಡ ಹೋಟೆಲ್ ಮಾಲೀಕ ಮಾದಪ್ಪರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಖಚಿತ ಮಾಹಿತಿ ಮೇರೆಗೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ಭೀಮನಹಳ್ಳಿ ಗ್ರಾಮದಲ್ಲಿದ್ದ ಆರೋಪಿಗಳ ಬಂಧಿಸಲು ಪೊಲೀಸರು ದಾಳಿ ನಡೆಸಿದ್ದರು.
ಆಗ ಆರೋಪಿ ಕಿರಣ್ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಸಿಪಿಐ ಶ್ರೀಧರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಪೇದೆ ನೆರವಿಗೆ ಧಾವಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಚಗೆರೆ ಕಿರಣ್ (24), ಕೊತ್ತತ್ತಿ ಗ್ರಾಮದ ಆನಂದ್, ಶರತ್, ಶ್ರೀನಿವಾಸ, ಕೃಷ್ಣಚಾರಿ ಬಂಧಿಸಲಾಗಿದೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಡ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಮಂಡ್ಯ ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಗಾಯಗೊಂಡಿರುವ ಸಿಬ್ಬಂದಿ ಹಾಗೂ ಆರೋಪಿ ಆರೋಗ್ಯ ವಿಚಾರಿಸಿದರು. ಘಟನೆ ಬಗ್ಗೆ ಮಾಹಿತಿ ಪಡೆದು, ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಸೂಕ್ತ ಸಲಹೆ, ಸೂಚನೆ ನೀಡಿದರು.