ಮಂಗಳೂರು: ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕೆಎಸ್ಆರ್‌ಟಿಸಿ ಸಿಹಿಸುದ್ದಿಯನ್ನು ನೀಡಿದೆ. ಪ್ರಯಾಣಿಕರ ಬೇಡಿಕೆಯಂತೆ ಈ ಮಾರ್ಗದಲ್ಲಿ ಶೀಘ್ರದಲ್ಲೇ ನೂತನ 4 ರಾಜಹಂಸ ಮಾದರಿ ಬಸ್‌ಗಳ ಸಂಚಾರ ಆರಂಭವಾಗಲಿದೆ.
ಕೆಲವು ದಿನಗಳ ಹಿಂದೆ ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಪ್ರಾಯೋಗಿಕವಾಗಿ ರಾಜಹಂಸ ಬಸ್‌ಗಳ ಸಂಚಾರವನ್ನು ಆರಂಭಿಸಿತ್ತು. ಈ ಬಸ್ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ, ಹೆಚ್ಚಿನ ಬಸ್‌ಗಳಿಗೆ ಬೇಡಿಕೆ ಬಂದಿದೆ.
ಮಂಗಳೂರಿನಲ್ಲಿ ಸರ್ಕಾರಿ ಬಸ್ ಸೇವೆಯನ್ನು ಉತ್ತಮಗೊಳಿಸುತ್ತಿರುವುದಕ್ಕೆ ಅಧಿಕಾರಿಗಳಿಗೆ ಜನರು ಧನ್ಯವಾದಗಳನ್ನು ತಿಳಿಸುತ್ತಿದ್ದಾರೆ. ಕಾಸರಗೋಡು ಹೆದ್ದಾರಿ ಕಾಮಗಾರಿ ಪೂರ್ಣಗೊಂಡ ಬಳಿಕ ಹೆಚ್ಚಿನ ಬಸ್‌ಗಳ ಸಂಚಾರವನ್ನು ಆರಂಭಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರು.
4 ಹೆಚ್ಚುವರಿ ಬಸ್‌ಗಳ ಸಂಚಾರ: ಒಂದು ಕಾಲದಲ್ಲಿ ರಾಜಹಂಸ ಕೆಎಸ್ಆರ್‌ಟಿಸಿಯ ಐಷಾರಾಮಿ ಬಸ್ ಆಗಿತ್ತು. ಆದರೆ ಈಗ ಇನ್ನೂ ಅತ್ಯಾಧುನಿಕ ಬಸ್‌ಗಳು ನಿಗಮಕ್ಕೆ ಸೇರಿದ್ದು, ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ರಾಜಹಂಸ ಬಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ.
ಕಾಸರಗೋಡು ಹೆದ್ದಾರಿ ಕಾಮಗಾರಿಯೂ ಪೂರ್ಣಗೊಂಡಿದ್ದು, ಈಗ ಉಭಯ ನಗರದ ನಡುವೆ ಹೆಚ್ಚಿನ ಬಸ್‌ಗಳ ಸಂಚಾರವನ್ನು ನಡೆಸಲು ಕೆಎಸ್ಆರ್‌ಟಿಸಿ ಮುಂದಾಗಿದೆ. ಆದ್ದರಿಂದ ಮಂಗಳೂರು-ಕಾಸರಗೋಡು ನಡುವೆ 4 ರಾಜಹಂಸ ಬಸ್‌ಗಳನ್ನು ಓಡಿಸಲಾಗುತ್ತದೆ.
ಮಂಗಳೂರು-ಕಾಸರಗೋಡು ನಡುವೆ ಪ್ರತಿದಿನ ನೂರಾರು ಜನರು ಸಂಚಾರವನ್ನು ನಡೆಸುತ್ತಾರೆ. ಈ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್‌ಗಳು ಸಂಚಾರವನ್ನು ನಡೆಸುತ್ತವೆ. ಆದರೆ ಕೆಎಸ್ಆರ್‌ಟಿಸಿ ಹೆಚ್ಚಿನ ರಾಜಹಂಸ ಬಸ್‌ಗಳನ್ನು ಓಡಿಸಲು ಮುಂದಾಗಿದೆ.
ಮಂಗಳೂರು-ಕಾಸರಗೋಡು ನಡುವೆ ಮಂಗಳೂರು-2ನೇ ಕೆಎಸ್ಆರ್‌ಟಿಸಿ ಘಟಕದಿಂದ ಬಸ್ ಸೇವೆಯನ್ನು ನೀಡಲಾಗುತ್ತದೆ. ಇದು ಸೂಪರ್ ಫಾಸ್ಟ್ ಸಾರಿಗೆ ವ್ಯವಸ್ಥೆಯಾಗಿದ್ದು, ಸೀಮಿತ ನಿಲುಗಡೆಗಳಿವೆ.
ಈ ಬಸ್ ಮೂಲಕ ತೊಕ್ಕೊಟ್ಟು, ಬೀರಿ, ತಲಪಾಡಿ, ಮಂಜೇಶ್ವರ, ಹೊಸಂಗಡಿ, ಉಪ್ಪಳ, ಕೈಕಂಬ, ನಯಾಬಜಾರ್, ಬಂದ್ಯೋಡು, ಕುಂಬ್ಳೆಗೆ ಸಹ ಸಂಚಾರ ನಡೆಸಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಾಸರಗೋಡು-ಮಂಗಳೂರು ನಡುವಿನ ಟಿಕೆಟ್ ದರ 100 ರೂ. ಆಗಿದೆ. ಪ್ರತಿದಿನ ಎರಡು ಬಸ್‌ಗಳು 6 ಟ್ರಿಪ್‌ಗಳನ್ನು ಮಾಡುತ್ತಿವೆ. ಈಗ ಇನ್ನೂ 4 ರಾಜಹಂಸ ಬಸ್ ಸೇವೆಯನ್ನು ಆರಂಭಿಸಿದರೆ ಜನರಿಗೆ ಅನುಕೂಲವಾಗಲಿದೆ.
ಮಂಗಳೂರು-ಧರ್ಮಸ್ಥಳ ಮತ್ತು ಮಂಗಳೂರು-ಕಾಸರಗೋಡು ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ರಾಜಹಂಸ ಬಸ್‌ಗಳ ಸಂಚಾರವನ್ನು ಆರಂಭಿಸಿತ್ತು. ಈಗ ಮಂಗಳೂರು-ಕಾಸರಗೋಡು ಮಾರ್ಗಕ್ಕೆ ಬೇಡಿಕೆ ಹೆಚ್ಚಿರುವ ಹಿನ್ನಲೆಯಲ್ಲಿ ಇನ್ನಷ್ಟು ಬಸ್‌ಗಳ ಸಂಚಾರವನ್ನು ಪ್ರಾರಂಭಿಸಲಾಗುತ್ತಿದೆ.
ಕಾಸರಗೋಡು-ಮಂಗಳೂರು ಬಹು ಬೇಡಿಕೆಯ ಮಾರ್ಗವಾಗಿದೆ. 2024ರಲ್ಲಿ ಈ ಮಾರ್ಗದಲ್ಲಿ ಅಶ್ವಮೇಧ ಬಸ್‌ಗಳನ್ನು ಓಡಿಸಲು ಕೆಎಸ್ಆರ್‌ಟಿಸಿ ಚಿಂತನೆಯನ್ನು ನಡೆಸಿತ್ತು. ಈ ಮಾರ್ಗದಲ್ಲಿ 34 ಬಸ್‌ಗಳು 228 ಟ್ರಿಪ್ ಸಂಚಾರವನ್ನು ನಡೆಸುತ್ತದೆ. ಆದ್ದರಿಂದ ಪ್ರಯಾಣಿಕರ ಬೇಡಿಕೆಯಂತೆ ಹೊಸ ಹೊಸ ಪ್ರಯೋಗವನ್ನು ಮಾಡಲಾಗುತ್ತಿದೆ.
ಈ ಮಾರ್ಗದಲ್ಲಿ 40ಕ್ಕೂ ಅಧಿಕ ನಿಲುಗಡೆ ಇದೆ. ಆದ್ದರಿಂದ ಪ್ರಯಾಣಿಕರ ಸಮಯ ವ್ಯರ್ಥವಾಗುತ್ತಿದೆ. ಹಾಗಾಗಿ ಸೀಮಿತ ನಿಲುಗಡೆಯ ಬಸ್ ಸೇವೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಆದ್ದರಿಂದ ರಾಜಹಂಸ 4 ಬಸ್ ಸೇವೆ ಆರಂಭವಾದರೂ ಪ್ರಯಾಣಿಕರಿಂದ ಭರ್ತಿಯಾಗುವ ನಿರೀಕ್ಷೆ ಇದೆ.