Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ KSRTC: ಮಂಗಳೂರು-ಬೆಂಗಳೂರು ನಡುವೆ ಹೊಸ ಐಷಾರಾಮಿ ಬಸ್, ವಿವರ

KSRTC: ಮಂಗಳೂರು-ಬೆಂಗಳೂರು ನಡುವೆ ಹೊಸ ಐಷಾರಾಮಿ ಬಸ್, ವಿವರ

0

ಮಂಗಳೂರು: ಐಷಾರಾಮಿ ಬಸ್ ಸೇವೆಗಳನ್ನು ನೀಡುವಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ ಕೆಎಸ್ಆರ್‌ಟಿಸಿ. ಈಗ ನಿಗಮ ಹೊಸ ಐರಾವತ್ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್‌ಗಳನ್ನು ಲೋಕಾರ್ಪಣೆ ಮಾಡಿದೆ.

ಕಳೆದ ವಾರ ಬೆಂಗಳೂರು ನಗರದಲ್ಲಿ ನಡೆದ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ)ದ ಹೊಸ ಐರಾವತ್ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್‌ಗಳ ಸಂಚಾರಕ್ಕೆ ಚಾಲನೆ ನೀಡಲಾಗಿದೆ.

ಈ ಬಸ್‌ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸಲಿದೆ. ಒಟ್ಟು 5 ಹೊಸ ಐರಾವತ್ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್‌ಗಳಲ್ಲಿ 2 ಮಂಗಳೂರು ವಿಭಾಗಕ್ಕೆ ಸಿಕ್ಕಿದೆ.

ಬಸ್ ಸೇವೆಗೆ ಚಾಲನೆ: ಹೊಸ ಐರಾವತ್ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್‌ಗಳು ಕೆಎಸ್ಆರ್‌ಟಿಸಿಯ ಅಂಬಾರಿ ಉತ್ಸವ್ ಮಾದರಿಯದ್ದು. ಮಂಗಳೂರು-ಬೆಂಗಳೂರು ನಡುವೆ ಈ ಬಸ್‌ಗಳ ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಗಿದೆ.

ಕೆಎಸ್ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ನಿಯಂತ್ರಕ ರಾಜೇಶ್ ಶೆಟ್ಟಿ ಮಾತನಾಡಿ, “ವಿಭಾಗ 2 ಹೊಸ ಐರಾವತ್ ಕ್ಲಬ್ ಕ್ಲಾಸ್ 2.0 ಸೀಟರ್ ಬಸ್‌ಗಳನ್ನು ಪಡೆದಿದೆ. ಈ ಬಸ್ ಪುತ್ತೂರು, ಹಾಸನ ಮಾರ್ಗದ ಮೂಲಕ ಸಂಚಾರವನ್ನು ನಡೆಸಲಿವೆ” ಎಂದು ಹೇಳಿದ್ದಾರೆ.

ಇದೇ ಮೊದಲ ಬಾರಿಗೆ ಬೆಂಗಳೂರು-ಮಂಗಳೂರು ನಡುವೆ ಹಗಲು ಹೊತ್ತಿನ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಮಧ್ಯಾಹ್ನ 1 ಗಂಟೆಗೆ ಮಂಗಳೂರು ನಗರದಿಂದ ಹೊರಡುವ ಬಸ್ ರಾತ್ರಿ 8 ಗಂಟೆಗೆ ಬೆಂಗಳೂರು ತಲುಪಲಿದೆ. ಹೆಚ್ಚುವರಿಯಾಗಿ ಪುತ್ತೂರು-ಸುಳ್ಯ-ಮೈಸೂರು ಮಾರ್ಗದಲ್ಲಿಯೂ ಎಸಿ ಸ್ಲೀಪರ್ ಬಸ್ ಪರಿಚಯಿಸಲಾಗಿದೆ.

ಕೆಎಸ್ಆರ್‌ಟಿಸಿ ಪ್ರಸ್ತುತ 445 ಪ್ರೀಮಿಯಂ ಬಸ್‌ಗಳನ್ನು ಹೊಂದಿದೆ. ಇವುಗಳಲ್ಲಿ 332 ವೋಲ್ವೋ ಮತ್ತು 113 ನಾನ್ ವೋಲ್ವೋ ಬಸ್‌ಗಳು. ಪ್ರಯಾಣಿಕರ ಬೇಡಿಕೆಯಂತೆ ಹೊಸ ಹೊಸ ಮಾರ್ಗದಲ್ಲಿ ಐಷಾರಾಮಿ ಬಸ್‌ಗಳನ್ನು ಓಡಿಸಲಾಗುತ್ತಿದೆ.

ಮಂಗಳೂರು ವಿಭಾಗ 1982ರಲ್ಲಿ ರಚನೆಗೊಂಡಿತು. 550 ಟ್ರಿಪ್ ಬಸ್‌ಗಳ ಸಂಚಾರವನ್ನು ವಿಭಾಗ ಪ್ರತಿದಿನ ನಿರ್ವಹಣೆ ಮಾಡುತ್ತದೆ. ಪ್ರತಿದಿನ ಸುಮಾರು 1.2 ಲಕ್ಷ ಜನರು ಸಂಚಾರವನ್ನು ನಡೆಸುತ್ತಾರೆ.

ರಾಜಧಾನಿ ಬೆಂಗಳೂರು-ಮಂಗಳೂರು ನಡುವೆ ಪ್ರತಿದಿನ ನೂರಾರು ಜನರು ಸಂಚಾರವನ್ನು ನಡೆಸುತ್ತಾರೆ. ವಾರಾಂತ್ಯ, ಸಾಲು ಸಾಲು ಹಬ್ಬದ ಸಂದರ್ಭದಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸಲು ಬಸ್, ರೈಲು ಟಿಕೆಟ್‌ಗಳು ಸಿಗುವುದಿಲ್ಲ. ಆದ್ದರಿಂದ ಪ್ರಯಾಣಿಕರ ಬೇಡಿಕೆ ಪರಿಗಣಿಸಿ ಕೆಎಸ್ಆರ್‌ಟಿಸಿ ಹೊಸ ಬಸ್ ಸೌಲಭ್ಯವನ್ನು ಆರಂಭಿಸಿದೆ.

ಕೆಎಸ್ಆರ್‌ಟಿಸಿ ಒಟ್ಟು 8,836 ಬಸ್‌ಗಳನ್ನು ಹೊಂದಿದೆ. ಇದರಲ್ಲಿ 5,874 ನಗರ ಸಾರಿಗೆ, 2,149 ವೊಲ್ವೋ, 332 ನಾನ್ ಎಸಿ ವೊಲ್ವೋ, ಮರ್ಸಿಡೆಸ್ ಬೆಂಜ್, ಸ್ಕ್ಯಾನಯಾ, ಟಾಟಾ ಎಸಿ ಸ್ಲೀಪರ್ ಬಿಎಸ್‌6 ಬಸ್‌ಗಳು ಸಹ ಕೆಎಸ್ಆರ್‌ಟಿಸಿ ಬಳಿ ಇವೆ.

ದೇಶದಲ್ಲಿಯೇ ಉತ್ತಮ ಸಾರಿಗೆ ಸಂಪರ್ಕ ನೀಡುವಲ್ಲಿ, ಐಷಾರಾಮಿ ಬಸ್‌ಗಳನ್ನು ಹೊಂದಿರುವುದರಲ್ಲಿ, ಬಸ್‌ಗಳ ಉತ್ತಮ ನಿರ್ವಹಣೆಯಲ್ಲಿ ಕೆಎಸ್ಆರ್‌ಟಿಸಿ ಮೊದಲ ಸ್ಥಾನದಲ್ಲಿದೆ. ಇದಕ್ಕಾಗಿಯೇ ಹಲವು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಪಡೆದಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version