Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಕಲ್ಲಡ್ಕ ಭಟ್ ವಿರುದ್ಧ ಬಲವಂತದ ಕ್ರಮ ಬೇಡ – ನ್ಯಾಯಾಲಯ

ಕಲ್ಲಡ್ಕ ಭಟ್ ವಿರುದ್ಧ ಬಲವಂತದ ಕ್ರಮ ಬೇಡ – ನ್ಯಾಯಾಲಯ

0

ಸಂ. ಕ. ಸಮಾಚಾರ, ಮಂಗಳೂರು: ಪ್ರಚೋದನಕಾರಿ ಭಾಷಣ ಆರೋಪದಡಿ ದಾಖಲಾಗಿದ್ದ ಪ್ರಕರಣದಿಂದ ವಿಚಾರಣೆಗೆ ಹಾಜರಾಗುವಂತೆ ಪೊಲೀಸ್ ನೋಟಿಸ್ ಪಡೆದಿದ್ದ ಹಿಂದೂ ನಾಯಕ, ಆರ್‌ಎಸ್‌ಎಸ್ ಮುಂದಾಳು ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಆದೇಶ ನೀಡಿದೆ.

ಪುತ್ತೂರು ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಮುಂದಿನ ವಿಚಾರಣೆವರೆಗೆ ಬಂಧನ ಸಹಿತ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ನೀಡಿದೆ. ಪ್ರಚೋದನಕಾರಿ ಭಾಷಣ ಆರೋಪದಡಿ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ದ ಎಫ್‌ಐಆರ್ ದಾಖಲಾಗಿತ್ತು. ಅ.೨೦ರಂದು ಪುತ್ತೂರು ಉಪ್ಪಳಿಗೆಯಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಭಾಷಣ ಮಾಡಿದ್ದರು.

ಭಾಷಣದ ವೇಳೆ ಧಾರ್ಮಿಕ ಬಾವನೆಗಳ ಪ್ರಚೋಜನೆ, ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಈಶ್ವರಿ ಪದ್ಮುಂಜ ಎಂಬವರು ನೀಡಿದ ದೂರಿನ ಅನ್ವಯ ಎಫ್‌ಐಆರ್ ದಾಖಲಾಗಿತ್ತು. ಪ್ರಭಾಕರ ಭಟ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣ ಸಂಬಂಧ ಪುತ್ತೂರು ಗ್ರಾಮಂತರ ಪೊಲೀಸರು ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದರು.

ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಪೊಲೀಸರು ಕಲ್ಲಡ್ಕ ಪ್ರಭಾಕರ ಭಟ್ಗೆ ವಿಚಾರಣೆ ಹಾಜರಾಗಲು ನೋಟಿಸ್ ಜಾರಿ ಮಾಡಿದ್ದರು. ಹೀಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸರ ಎಫ್‌ಐಆರ್ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದರು. ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್ ದ್ವೇಷಪೂರಿತ ಎಂದು ವಾದಿಸಿದ್ದರು. ಇದೀಗ ಕೋರ್ಟ್ ಪೊಲೀಸರಿಗೆ ಮಹತ್ವದ ಸೂಚನೆ ನೀಡಿದೆ. ಮುಂದಿನ ವಿಚಾರಣೆವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಸೂಚಿಸಿದೆ.

ಮುಂದಿನ ವಿಚಾರಣೆಯನ್ನು ಅಕ್ಟೋಬರ್ 29ಕ್ಕೆ ಮುಂದೂಡಿದೆ. ಅರ್ಜಿ ವಿಚಾರಣೆ ನಡೆಸಿರುವ ಕೋರ್ಟ್, ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ. ಅ.29ರ ವರೆಗೆ ಕಲ್ಲಡ್ಕ ಪ್ರಭಾಕರ ಭಟ್ ನಿರಾಳರಾಗಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version