Home ನಮ್ಮ ಜಿಲ್ಲೆ ಕೊಪ್ಪಳ ಕೊಪ್ಪಳ: ʻನಾಳೆ ಇರ್ತಿನೋ ಇಲ್ವೋ’ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಸಾವು

ಕೊಪ್ಪಳ: ʻನಾಳೆ ಇರ್ತಿನೋ ಇಲ್ವೋ’ ಎಂದು ರೀಲ್ಸ್ ಮಾಡಿದ್ದ ಸ್ವಾಮೀಜಿ ಸಾವು

0

ಗಂಗಾವತಿ: ನಾಳೆ ಇರ್ತೀನೋ ಇಲ್ವೋ, ಏನ್ ಮಾಡ್ತೀನೋ ಗೊತ್ತಿಲ್ಲ ಎಂದು ರೀಲ್ಸ್ ಮಾಡಿದ್ದ ವ್ಯಕ್ತಿ ಮರುದಿನವೇ ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ.

ಆಂಧ್ರ ಮೂಲದ ಯರಗೇರಾ ಗುಡಿಯ ಪೂಜಾರಿ ಲಕ್ಷ್ಮಯ್ಯ ಸ್ನಾನ ಮಾಡಲು ಹೋದಾಗ ನೀರಿನಲ್ಲಿ ಕಾಲು ಜಾರಿ ಬಿದ್ದಿದ್ದಾರೆ. ನೀರಿನಲ್ಲಿ ಬಿದ್ದು ಚೀರಾಡುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿ ಆನೆಗೊಂದಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದರು. ವೈದ್ಯರಿಲ್ಲದ ಕಾರಣ ಗಂಗಾವತಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಲಕ್ಷ್ಮಯ್ಯ ಮೃತಪಟ್ಟರು ಎನ್ನಲಾಗಿದೆ.

ಲಕ್ಷ್ಮಯ್ಯ ಮೂವರು ಸ್ನೇಹಿತರೊಂದಿಗೆ ಗಂಗಾವತಿಯ ಆನೆಗೊಂದಿಗೆ ಬಂದಿದ್ದರು. ಭಾನುವಾರ ಹುಲಿಗೆಮ್ಮ ದೇವಸ್ಥಾನಕ್ಕೆ ಬಂದಿದ್ದ ಲಕ್ಷ್ಮಯ್ಯ, ಆಗ ರೀಲ್ಸ್ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಕುರಿತು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಲು ಜಾರಿ ನದಿಗೆ ಬಿದ್ದು ಶಿಕ್ಷಕ ಸಾವು: ಹೊಸದುರ್ಗ ತಾಲೂಕಿನ ವೇದಾವತಿ ನದಿಯಲ್ಲಿ ಕಾಲುಜಾರಿ ಬಿದ್ದು ಶಿಕ್ಷಕ ನೋರ್ವ ಮೃತಪಟ್ಟ ಘಟನೆ ತಾಲೂಕಿನ ಕೆಲೋಡು ಗ್ರಾಮದಲ್ಲಿ ನಡೆದಿದ್ದು, ಈ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ.

ಮೃತಪಟ್ಟ ವ್ಯಕ್ತಿಯನ್ನು ತಾಲೂಕಿನ ಮತ್ತೋಡು ಗ್ರಾಮದ ಹೊತ್ತರಗೊಂಡನಹಳ್ಳಿ ಗ್ರಾಮದ ಲಕ್ಷ್ಮಣ್‌ ನಾಯ್ಕ (55) ಎಂದು ಗುರುತಿಸಲಾಗಿದೆ. ಈತ ತಾಲೂಕಿನ ಮತ್ತೋಡು ಹೋಬಳಿಯ ಗುಡ್ಡದನೇರಲಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಶಾಲೆಗೆ 3 ದಿನ ರಜೆ ಹಾಕಿದ್ದ ಲಕ್ಷ್ಮಣ್‌ ನಾಯ್ಕ ಅವರು ಗುರುವಾರದಂದು ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದರು. ಕೆಲ್ಲೋಡಿನ ಚೌಡೇಶ್ವರಿ ದೇವಾಲಯಕ್ಕೆ ತೆರಳಿದ್ದ ಅವರು, ದೇವಸ್ಥಾನ ಹಿಂಭಾಗದ ವೇದಾವತಿ ನದಿಯಲ್ಲಿ ಕಾಲು ತೊಳೆಯಲು ಹೋಗಿ ಆಯತಪ್ಪಿ ನದಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಕುಟುಂಬಸ್ಥರು ದೇವಸ್ಥಾನ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದರೂ ಪತ್ತೆ ಆಗಿಲ್ಲ. ಶನಿವಾರ ಮೃತದೇಹ ನದಿಯಲ್ಲಿ ತೇಲುತ್ತಿರುವುದನ್ನು ಸ್ಥಳೀಯ ಮೀನುಗಾರರು ಪೊಲೀಸರಿಗೆ ತಿಳಿಸಿದ್ದಾರೆ. ಈ ಬಗ್ಗೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version